ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

Oplus_0

ಉಡುಪಿ: ಬಡಗುತಿಟ್ಟಿನ ಪ್ರಸಿದ್ಧ ಭಾಗವತ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ (68) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.

ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಎಂ.ನಾರ್ಣಪ್ಪ ಉಪ್ಪೂರರ ಶಿಷ್ಯರಾದ ಇವರು,ಕಾಳಿಂಗ ನಾವಡರ ಒಡನಾಡಿಯಾಗಿ ರಂಗ ಪ್ರವೇಶಿಸಿ, ವಿವಿಧ ಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಒಟ್ಟೂ ಸುಮಾರು ನಾಲ್ಕುವರೆ ದಶಕಗಳ ಕಲಾ ಸೇವೆ ಗೈದಿದ್ದರು. ತಮ್ಮ ಸುಮಧುರ ಕಂಠ,ಪರಂಪರೆಯ ಶೈಲಿ,ರಂಗ ತಂತ್ರದಿಂದ ಹಲವು ಪೌರಾಣಿಕ ಮತ್ತು ಹೊಸ ಪ್ರಸಂಗಗಳಿಗೆ ಜೀವ ತುಂಬಿದ್ದರು. ಯಕ್ಷಗಾನ ಕಲಾರಂಗ ‌ ಅವರಿಗೆ ನಾರ್ಣಪ್ಪ ಉಪ್ಪೂರರ ಪ್ರಶಸ್ತಿ ನೀಡಿ ಗೌರವಿಸಿತ್ತು. ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಅವರ ನಿಧನಕ್ಕೆಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್,ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.ಇಂದು ಸಂಜೆ ಕಿರಿಮಂಜೇಶ್ವರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಖ್ಯಾತ ಭಾಗವತ ಧಾರೇಶ್ವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂತಾಪ: ಬಡಗುತಿಟ್ಟಿನ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (67) ಅವರ ಹಠಾತ್ ನಿಧನ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಯಕ್ಷಗಾನ ರಂಗದಲ್ಲಿ ಹೊಸ ಪ್ರಯೋಗಗಳ ಮೂಲಕ ಯಕ್ಷ ಪ್ರೇಮಿಗಳ ಮನದಂಗಳದಲ್ಲಿ ರಾರಾಜಿಸಿದ್ದ ಧಾರೇಶ್ವರ ಅವರು, ಕಾಳಿಂಗ ನಾವಡರ ಅಗಲುವಿಕೆಯ ಬಳಿಕ‌ ಉಂಟಾಗಿದ್ದ ನಿರ್ವಾತವನ್ನು ತುಂಬಬಲ್ಲರು ಎನ್ನುವಷ್ಡರ ಮಟ್ಟಿಗೆ ಬೆಳೆದಿರುವುದು ಇತಿಹಾಸ.
ಇಂತಹ ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ ಅವರೊಂದಿಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಧಾರೇಶ್ವರ ಯಕ್ಷ ಅಷ್ಟಾಹವನ್ನು ಒಂದು ದಶಕಗಳ ಕಾಲ ನಡೆಸಿದ ಸಂತ್ರಪ್ತಿ ಇದೆ. ಅವರಿಂದ ಯಕ್ಷಗಾನ ಲೋಕಕ್ಕೆ ಇನ್ನಷ್ಟು ಸೇವೆ,ಕೊಡುಗೆ ಹರಿದುಬರುವ ಸಂದರ್ಭದಲ್ಲಿಯೇ ಅವರ ಹಠಾತ್ ಅಗಲುವಿಕೆ ಯಕ್ಷ ಪ್ರೇಮಿಗಳಿಗೆ ಮರೆಯಲಾಗದ ನೋವು ತಂದಿದೆ.
ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಪರಮಾತ್ಮ ನೀಡಲಿ ಎಂದು ಹಾರೈಸುತ್ತೇನೆ.

Leave a Reply

Your email address will not be published. Required fields are marked *

error: Content is protected !!