ಲಾಕ್ಡೌನ್ ವೇಳೆ ಮಹಿಳೆಯರು ತಮ್ಮ ಆಭರಣ ಅಡವಿಟ್ಟಾಗ ಪ್ರಧಾನಿ ಮೋದಿ ಎಲ್ಲಿದ್ದರು- ಪ್ರಿಯಾಂಕಾ
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರವನ್ನು ಕಿತ್ತುಕೊಳ್ಳಲಿದೆ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಇಂದಿರಾಗಾಂಧಿ ಯುದ್ಧದ ಸಮಯದಲ್ಲಿ ತಮ್ಮ ಚಿನ್ನವನ್ನು ದೇಶಕ್ಕೆ ನೀಡಿದರೆ, ನನ್ನ ತಾಯಿಯ ಮಂಗಳಸೂತ್ರ ಈ ದೇಶಕ್ಕಾಗಿ ಬಲಿದಾನವಾಗಿದೆ ಎಂದರು.
ಮಂಗಳವಾರ ನಗರದ ಎಚ್.ಎಸ್.ಆರ್ ಬಡಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ಬಹಿರಂಗ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಆಯಿತು. ಕಾಂಗ್ರೆಸ್ 55 ವರ್ಷ ಆಡಳಿತ ನಡೆಸಿದೆ. ಯಾರಾದರೂ ನಿಮ್ಮ ಚಿನ್ನವನ್ನು ಕಿತ್ತುಕೊಂಡರೇ? ನಿಮ್ಮ ಮಾಂಗಲ್ಯವನ್ನು ಕಿತ್ತುಕೊಂಡರೇ? ನರೇಂದ್ರ ಮೋದಿಗೆ ಮಂಗಳಸೂತ್ರದ ಮಹತ್ವದ ಬಗ್ಗೆ ಗೊತ್ತಿದ್ದರೆ, ಈ ರೀತಿಯ ಅನೈತಿಕ ಮಾತುಗಳನ್ನು ಆಡುತ್ತಿರಲಿಲ್ಲ ಎಂದು ಅವರು ಕಿಡಿಗಾರಿದರು.
ರೈತನ ಮೇಲೆ ಸಾಲ ಹೆಚ್ಚಾದರೆ ಆತನ ಹೆಂಡತಿ ತನ್ನ ಮಂಗಳಸೂತ್ರವನ್ನು ಅಡಮಾನ ಇಡಲು ನೀಡುತ್ತಾಳೆ. ಮನೆಯಲ್ಲಿ ಮದುವೆ ಅಥವಾ ಯಾರಾದರೂ ಅನಾರೋಗ್ಯ ಪೀಡಿತರಾದರೆ ಮಹಿಳೆ ತನ್ನ ಆಭರಣಗಳನ್ನು ಅಡಮಾನ ಇಡಲು ನೀಡುತ್ತಾಳೆ. ನೋಟುಗಳನ್ನು ಅಮಾನ್ಯ ಮಾಡಿದಾಗ ಮಹಿಳೆಯರು ಕಷ್ಟಪಟ್ಟು ಉಳಿತಾಯ ಮಾಡಿದ್ದನ್ನು ಕಸಿದುಕೊಂಡಾಗ ಮೋದಿಗೆ ಆ ಮಹಿಳೆಯರ ಬಗ್ಗೆ ನೆನಪು ಬರಲಿಲ್ಲವೇ? ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದರು.
ದೇಶದಲ್ಲಿ ರಾತ್ರೋರಾತ್ರಿ ಲಾಕ್ಡೌನ್ ಮಾಡಿದಾಗ ಕಾರ್ಮಿಕರು ನಡೆದುಕೊಂಡೆ ತಮ್ಮ ತಮ್ಮ ಮನೆಗಳತ್ತ ಹೊರಟಾಗ, ಕುಟುಂಬಗಳ ನಿರ್ವಹಣೆಗಾಗಿ ಮಹಿಳೆಯರು ತಮ್ಮ ಆಭರಣಗಳನ್ನು ಅಡವಿಟ್ಟು ಮನೆಗಳಿಗೆ ಆಸರೆಯಾದಾಗ ಮೋದಿ ಎಲ್ಲಿದ್ದರು. ರೈತರ ಆಂದೋಲನದಲ್ಲಿ 600 ರೈತರು ಸಾವನ್ನಪ್ಪಿದರು. ಅವರ ಪತ್ನಿಯರ ಮಂಗಳಸೂತ್ರದ ಬಗ್ಗೆ ಮೋದಿ ಆಲೋಚನೆ ಮಾಡಿದ್ದಾರೆಯೇ? ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಮಣಿಪುರದಲ್ಲಿ ಯೋಧನ ಪತ್ನಿಯನ್ನು ವಿವಸ್ತ್ರಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದಾಗ ಆಕೆಯ ಮಂಗಳಸೂತ್ರದ ಬಗ್ಗೆ ಆಲೋಚನೆ ಬರಲಿಲ್ಲವೇ? ಈಗ ಚುನಾವಣೆ ಸಂದರ್ಭದಲ್ಲಿ ಮಹಿಳೆಯರನ್ನು ಬೆದರಿಸುತ್ತಿರುವ ನಿಮಗೆ ನಾಚಿಕೆಯಾಗಬೇಕು. ಮಹಿಳೆಯರ ಮಂಗಳಸೂತ್ರದ ಬಗ್ಗೆ ಅಷ್ಟೇ ಕಾಳಜಿಯಿದ್ದಿದ್ದರೆ, ಅವರ ಮಕ್ಕಳಿಗೆ ಉದ್ಯೋಗ, ಬೆಲೆ ಏರಿಕೆಗೆ ಕಡಿವಾಣ, ವಿದ್ಯಾರ್ಥಿಗಳಿಗೆ ಶಿಕ್ಷಣ, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಶ್ರಮ ಪಡುತ್ತಿದ್ದರು ಎಂದು ಅವರು ಹೇಳಿದರು.
ಎಷ್ಟು ವರ್ಷಗಳ ಕಾಲ ಚುನಾವಣೆಯನ್ನು ಧರ್ಮದ ಆಧಾರದಲ್ಲಿ ನಡೆಸುತ್ತೀರಾ? ಈ ಚುನಾವಣೆಯನ್ನು ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳ ಆಧಾರದ ಮೇಲೆ ಎದುರಿಸಿ ನೋಡೋಣ. ನಿಮಗೆ ನೈತಿಕ ರಾಜಕೀಯ ಬೇಕೋ, ನಾಟಕೀಯ ರಾಜಕೀಯ ಬೇಕೋ, ಆಡಳಿತದ ರಾಜಕೀಯವೋ, ಸತ್ಯದ ರಾಜಕೀಯವೋ, ಪರೋಪಕಾರ ಬೇಕೋ, ಅಹಂಕಾರ ಬೇಕೋ ಎಂಬುದನ್ನು ನೀವೆ ನಿರ್ಧರಿಸಿ ಎಂದು ಜನರಿಗೆ ಅವರು ಕರೆ ನೀಡಿದರು.
ಈಗ ಸಮಯ ಬಂದಿದೆ. ನೀವು ಎಚ್ಚರಗೊಳ್ಳದಿದ್ದರೆ ದೇಶ ಪಾತಾಳಕ್ಕೆ ಹೋಗುತ್ತದೆ. ಈ ಸರಕಾರ ಎಲ್ಲ ಅನೈತಿಕ ಕೆಲಸಗಳನ್ನು ಮಾಡುತ್ತಿದ್ದರೂ ಮಾಧ್ಯಮಗಳಲ್ಲಿ ಅದನ್ನು ತಪ್ಪು ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ವಿಪಕ್ಷ, ಮಾಧ್ಯಮ, ನ್ಯಾಯಾಲಯ, ಜನರ ಅಧಿಕಾರ ರಕ್ಷಿಸಲು ಇರುವ ಎಲ್ಲ ಸಂಸ್ಥೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಾವು ಅದರ ವಿರುದ್ಧ ಹೋರಾಡುತ್ತಿದ್ದೇವೆ. ನೀವು ಯಾವಾಗ ಹೋರಾಡುತ್ತೀರಾ? ಎಂದು ಅವರು ಪ್ರಶ್ನಿಸಿದರು.
ನೀವು ನಿಮ್ಮ ಅಧಿಕಾರಕ್ಕಾಗಿ ಹೋರಾಡಲು ಪ್ರಾರಂಭಿಸಿ. ಬಿಜೆಪಿ ಹಾಗೂ ಮೋದಿಗೆ ಪಾಠ ಕಲಿಸಿ ನಿಮ್ಮ ವಿಷಯಗಳ ಮೇಲೆ ಚುನಾವಣೆ ನಡೆಯುವಂತೆ ಮಾಡಬೇಕು. 10 ವರ್ಷಗಳ ಆಡಳಿತದಲ್ಲಿ ಜನಸಾಮಾನ್ಯ ಜೀವನದಲ್ಲಿ ಯಾವ ಬದಲಾವಣೆ ತಂದಿದ್ದಾರೆ ಎಂಬುದನ್ನು ಸಾರ್ವಜನಿಕ ವೇದಿಕೆಯಲ್ಲಿ ಬಂದು ಅವರು ಹೇಳಲಿ ಎಂದು ಪ್ರಿಯಾಂಕಾ ಗಾಂಧಿ ಸವಾಲು ಹಾಕಿದರು.
ದೇಶದ ಜನತೆ ಜಾಗೃತರಾಗಿ, ನಿಮ್ಮ ಹಕ್ಕನ್ನು ಕೇಳಿ ಪಡೆಯಿರಿ. ಈಗ ಬದಲಾವಣೆ ತನ್ನಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ಯಾವ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನರಿಗೆ ಕೊಟ್ಟ ಭರವಸೆಗಳಂತೆ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿ, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆಯೋ, ಅದೇ ರೀತಿ ಕೇಂದ್ರದಲ್ಲಿಯೂ ನಿಮ್ಮ ಧ್ವನಿಯಾಗಿ ಕೆಲಸ ಮಾಡುವ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಅವರು ಮನವಿ ಮಾಡಿದರು.
ಸಾರ್ವಜನಿಕ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಝಮೀರ್ ಅಹ್ಮದ್ ಖಾನ್, ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್, ಶಾಸಕರಾದ ಪ್ರಿಯಾಕೃಷ್ಣ, ಎ.ಸಿ.ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹಾರಿಸ್ ನಲಪಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.