ಕಾಪು ಪುರಸಭೆ ಅಭಿವೃದ್ಧಿಗೆ ಸೊರಕೆ ಎಷ್ಟು ಅನುದಾನ ತಂದಿದ್ದಾರೆ ಘೋಷಿಸಲಿ – ಲಾಲಾಜಿ
ಕಾಪು: ಪುರಸಭೆ ರಚನೆ ವೇಳೆ ವಾರ್ಷಿಕ ₹150 ಕೋಟಿ ಅನುದಾನ ತರಲಾಗುವುದು ಎಂದು ತಿಳಿಸಿದ್ದ ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಪುರಸಭೆ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಘೋಷಿಸಲಿ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಪ್ರಶ್ನಿಸಿದರು.
ಕಾಪು ಪುರಸಭಾ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಮಾಡಿದ ಟೀಕೆಗಳಿಗೆ ಪ್ರತಿಕ್ರಿಯಿಸಿ ಕಾಪು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಲಾಲಾಜಿ ಮಾತನಾಡಿದರು.
‘ಪುರಸಭೆ ವ್ಯಾಪ್ತಿಯ ಕೊಳಚೆ ನೀರಿನ ಸಂಸ್ಕರಣೆ, ಕೆರೆ ಅಭಿವೃದ್ಧಿ, ಕಸ ವಿಲೇವಾರಿ ಘಟಕ, ಮಾರುಕಟ್ಟೆ ಅಭಿವೃದ್ಧಿಗೆ ಸರಿಯಾದ ಆರ್ಥಿ ಯೋಜನೆಯಿಲ್ಲದೆ ಅನುದಾನ ಬಿಡುಗಡೆ ಮಾಡಿರುವ ಪರಿಣಾಮ ಸಾರ್ವಜನಿಕ ಹಿತದೃಷ್ಟಿಯಿಂದ ಪೂರ್ಣಗೊಳಿಸಿ ಸಾರ್ವಜನಿಕ ಹಣದ ಸದ್ವಿನಿಯೋಗ ಮಾಡಲು ಕಾಮಗಾರಿಗಳಲ್ಲಿ ಬದಲಾವಣೆ ಮಾಡಿ ಅದಕ್ಕೆ ಅವಶ್ಯ ಅನುದಾನಗಳನ್ನು ಜೋಡಿಸಬೇಕಾದ ಅನಿವಾರ್ಯತೆ ಈಗ ಬಂದಿದೆ’ ಎಂದು ಸ್ಪಷ್ಟಪಡಿಸಿದರು.
‘ಸುಸಜ್ಜಿತ ಮಾರುಕಟ್ಟೆ, ಕೊಳಚೆ ನೀರು ಶುದ್ಧಿಕರಣ ಘಟಕ, ಕುರ್ಕಾಲು ಅಣೆಕಟ್ಟಿನಿಂದ ಕಾಪು ಪುರಸಭೆ ವ್ಯಾಪ್ತಿಯ ನಿವಾಸಿಗಳಿಗೆ ನೀರು ಪೂರೈಸುವ ಯೋಜನೆ ಮುಂತಾದವುಗಳನ್ನು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು 6 ತಿಂಗಳಲ್ಲಿ ಪೂರ್ಣ ಗೊಳಿಸಲಾಗುವುದು. ಮಿನಿ ವಿಧಾನಸೌಧ ನಿರ್ಮಾಣ ಯೋಜನೆ ಕಾಮಗಾರಿ ಶೀಘ್ರದಲ್ಲಿ ಆರಂಭಿಸಲಾಗುವುದು’ ಎಂದು ತಿಳಿಸಿದರು.
ಬಿಜೆಪಿ ಕಾಪು ಕ್ಷೇತ್ರ ಘಟಕದ ಅಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಪುರಸಭೆ ಸದಸ್ಯ ಅರುಣ್ ಶೆಟ್ಟಿ ಪಾದೂರು ಇದ್ದರು.