ಸಾಲಗಾರರಿಗೆ ಗುಡ್ ನ್ಯೂಸ್: ಚಕ್ರಬಡ್ಡಿ ಮನ್ನಾ- ಕೇಂದ್ರದ ಘೋಷಣೆ
ನವದೆಹಲಿ: ಕಂತು ಮರುಪಾವತಿ ಮುಂದೂಡಿಕೆಯ ಆರು ತಿಂಗಳ ಅವಧಿ ಯ ಚಕ್ರಬಡ್ಡಿಯನ್ನು ಸಾಲಗಾರರ ಖಾತೆಗೆ ಜಮಾ ಮಾಡುವಂತೆ ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ಶನಿವಾರ ಸೂಚನೆ ನೀಡಿದೆ. ₹2 ಕೋಟಿ ವರೆಗಿನ ಸಾಲಗಳಿಗೆ ಇದು ಅನ್ವಯ ಆಗಲಿದೆ. ಬ್ಯಾಂಕ್‌ಗಳು ಚಕ್ರಬಡ್ಡಿಯನ್ನು ಮನ್ನಾ ಮಾಡಲಿವೆ. ಬಳಿಕ ಆ ಮೊತ್ತವನ್ನು ಸರ್ಕಾರವು ಬ್ಯಾಂಕುಗಳಿಗೆ ಪಾವತಿಸಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 6,500 ಕೋಟಿ ಹೊರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ನಿರ್ಧಾರದಿಂದಾಗಿ ಶಿಕ್ಷಣ, ಗೃಹ, ಗ್ರಾಹಕ ಬಳಕೆ ವಸ್ತುಗಳು, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ, ವೈಯಕ್ತಿಕ ಹಾಗೂ ಉಪಭೋಗದ ಉದ್ದೇಶಕ್ಕೆ ಸಾಲ ಪಡೆದವರಿಗೆ ಮತ್ತು ಎಂಎಸ್‌ಎಂಇಗಳಿಗೆ ತುಸು ನೆಮ್ಮದಿ ದೊರೆತಂತಾಗಿದೆ. ಮಾರ್ಚ್ 1 ರಿಂದ ಆಗಸ್ಟ್ 31ರವರೆಗಿನ ಸಾಲದ ಕಂತು ಮರುಪಾವತಿ ಮುಂದೂಡಿಕೆ ಅವಧಿಗೆ ಇದು ಅನ್ವಯವಾಗಲಿದೆ. ಮುಂದೂಡಿಕೆಯ ಪ್ರಯೋಜನ ಪಡೆಯದೇ ಇರುವವರಿಗೂ ಇದರ ಲಾಭ ದೊರೆಯಲಿದೆ ಎಂದು ಕೇಂದ್ರ ಹೇಳಿದೆ. |