ಚುನಾವಣಾ ಪ್ರಚಾರದಲ್ಲಿ ಒಬ್ಬಂಟಿಯಾದರೇ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ?
ಉಡುಪಿ, ಏ.21(ಉಡುಪಿ ಟೈಮ್ಸ್ ವರದಿ) ಚುನಾವಣೆಗೆ ಕೇವಲ ಬೆರಳೆಣಿಕೆಯ ದಿನಗಳು ಬಾಕಿ ಇದ್ದು, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಯಾವುದೇ ರಾಷ್ಟ್ರ, ರಾಜ್ಯ ಮಟ್ಟದ ನಾಯಕರಾಗಲಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರಚಾರ ಸಭೆಯಾಗಲಿ ನಡೆಸದೆ ಇರುವುದರಿಂದ ಜಯಪ್ರಕಾಶ್ ಹೆಗ್ಡೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆ ಹಾಗೂ ಜಯಪ್ರಕಾಶ್ ಹೆಗ್ಡೆ ಅವರ ಪರ ಕಾರ್ಯಕರ್ತರು ಭರ್ಜರಿಯಾಗಿ ಮತ ಪ್ರಚಾರ ನಡೆಸುತ್ತಿದ್ದರೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಜಿಲ್ಲೆಯತ್ತ ತಲೆಯೇ ಹಾಕದೆ ಇರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
2012ರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಪಕ್ಷದ ಸಂಘಟಿತ ಹೋರಾಟವೇ ಆಗಿತ್ತು.
ಆದರೇ ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಅಶೋಕ ಕೊಡವೂರು ಸಹಿತ ಪ್ರಮುಖ ನಾಯಕರಾದ ಮಾಜಿ ಸಚಿವರು, ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವ ಅಭ್ಯರ್ಥಿಗಳು ನಿರಾಸಕ್ತಿ ಹೊಂದಿದ್ದಾರೆ.
ಒಂದೆಡೆ ಈ ಚುನಾವಣೆಯಲ್ಲಿ ಟಿಕೆಟ್ಗಾಗಿ ಲಾಬಿ ನಡೆಸಿದ್ದ ಆಕಾಂಕ್ಷಿಗಳೂ ಕೂಡ ಯಾವುದೇ ದೊಡ್ಡ ಮಟ್ಟದ ಪ್ರಚಾರ ಸಭೆಯಲ್ಲಿ ತೊಡಗಿಸಿಕೊಳ್ಳದೆ, ಸಮಾವೇಶಗಳನ್ನು ಸಂಘಟಿಸುವ ಬಗ್ಗೆಯೂ ಯಾವುದೇ ಕಾರ್ಯಯೋಜನೆ ಹಾಕಿಕೊಳ್ಳದೆ ತಟಸ್ಥವಾಗಿರುವುದು ಕೂಡ ಜಯಪ್ರಕಾಶ್ ಹೆಗ್ಡೆ ಅವರು ಹಿನ್ನಡೆಗೆ ಕಾರಣವಾಗಬಹುದು ಕಾರ್ಯಕರ್ತರಿಂದ ಅಭಿಪ್ರಾಯವ್ಯಕ್ತವಾಗಿದೆ.
ಕಾಂಗ್ರೆಸ್ನ ಗ್ಯಾರಂಟಿ ಭಾಗ್ಯಗಳು ಜನತೆಗೆ ಮುಟ್ಟಿದ್ದರೂ, ಅದನ್ನು ಸಮರ್ಥವಾಗಿ ಜನ ಮನ ತಲುಪುವಂತೆ ಮಾಡುವ ಕಾರ್ಯ ತಂತ್ರಗಳನ್ನು ರೂಪಿಸುವಲ್ಲಿ ಇಲ್ಲಿನ ನಾಯಕರು ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಎರಡು ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಂತೆ ಮತಯಾಚಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ಗಂಭೀರ ಆರೋಪ ಮಾಡಿದ್ದರೂ ಜಿಲ್ಲಾ ನಾಯಕರು ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವಂತೆ ಇದ್ದಾರೆ.
ಇಲ್ಲಿನ ನಾಯಕರಿಗೆ ತಮ್ಮ ಅಭ್ಯರ್ಥಿ ಗೆದ್ದರೆ ತಾವೆಲ್ಲಿ ಮೂಲೆ ಗುಂಪು ಆಗುತ್ತೇವೆ ಎನ್ನುವ ಭಯ ಕಾಡಿದ ವರ್ತನೆ ಎನ್ನುವುದು ಕಟ್ಟಾ ಕಾಂಗ್ರೆಸ್ ಅಭಿಮಾನಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಇದೆಲ್ಲವನ್ನೂ ಸರಿದೂಗಿಸಬೇಕಾದರೆ ರಾಷ್ಟ್ರ ಮಟ್ಟದ ನಾಯಕರು, ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಚಾರ ಸಭೆಯಲ್ಲಿ ತೊಡಗಿಸಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು.