ಉಡುಪಿ: ಅಲ್ಪಸಂಖ್ಯಾತರ ತುಷ್ಟಿಕರಣದಿಂದ ಹಿಂದು ಯುವತಿಯ ಬರ್ಬರ ಕೊಲೆಯಾಗಿದೆ- ಬಿ.ವೈ ವಿಜಯೇಂದ್ರ
ಉಡುಪಿ: ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಿರುವುದರ ಪರಿಣಾಮ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಗೆ ಹಿಂದು ಯುವತಿ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಸಿಎಂ, ಗೃಹ ಸಚಿವರು ವೈಯಕ್ತಿಕ ಕಾರಣ ಎಂದು ಹೇಳುತ್ತಿರುವುದು ವಿಪರ್ಯಾಸ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಉಡುಪಿ ಶಾರದಾ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಯುವ ಭಾರತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಮೈಸೂರಿನಲ್ಲಿ ಮೋದಿ ಹಾಡು ಹಾಡಿದ್ದಕ್ಕೆ ಪುಂಡರು, ದೇಶದ್ರೋಹಿಗಳು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಮೂತ್ರವಿಸರ್ಜನೆ ಮಾಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣವೇ ಈ ಎಲ್ಲಾ ಘಟನೆಗಳಿಗೆ ಕಾರಣ. ರಾಜ್ಯದಲ್ಲಿ ಹೆಣ್ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದೆಯೇ ಎಂಬ ಆತಂಕ ಕಾಡುತ್ತಿದೆ ಎಂದರು.
ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಗೆಲ್ಲಿಸಿ ಎಂದು ವಿನಂತಿ ಮಾಡುವ ಮೂರ್ಖ ನಾನಲ್ಲ. ಇಲ್ಲಿ ಪ್ರತಿಯೊಬ್ಬರ ಕಣ ಕಣದಲ್ಲೂ ಹಿಂದುತ್ವ ಇದೆ. ರಾಜ್ಯದಲ್ಲಿ ಎಲ್ಲಾ 28 ಕ್ಷೇತ್ರದಲ್ಲಿ ನಿಶ್ಚಿತವಾಗಿ ಬಿಜೆಪಿ ಗೆಲ್ಲುತ್ತದೆ. ರಾಜ್ಯಾಧ್ಯಕ್ಷನಾಗಿ 28 ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಮೋದಿಯವರಿಗೆ ಇನ್ನಷ್ಟು ಶಕ್ತಿಯನ್ನು ತುಂಬಲಿದ್ದೇವೆ. ಚುನಾವಣೆಯನ್ನು ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಇದಕ್ಕೆ ನಾವು ತಕ್ಕ ಉತ್ತರ ಕೊಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಉಡುಪಿ-ಚಿಕ್ಕಮಗಳೂರು ಬಿಜೆಪಿ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಸುನೀಲ್ ಕುಮಾರ್, ಹರೀಶ್ ಪೂಂಜಾ, ಮಾಜಿ ಶಾಸಕ ರಘುಪತಿ ಭಟ್, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ರಾಜ್ಯ ಮಹಿಳಾಮೋರ್ಚಾ ಪ್ರ.ಕಾರ್ಯದರ್ಶಿ ಶಿಲ್ಪಾ.ಜಿ ಸುವರ್ಣ, ಜಿ.ಪ್ರ.ಕಾರ್ಯದರ್ಶಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಸ್ತಾವಿಸಿದರು. ಪ್ರ.ಕಾರ್ಯದರ್ಶಿ ಶಶಾಂಕ್ ಶಿವತ್ತಾಯ ಸ್ವಾಗತಿಸಿದರು.