ಉದ್ಯಾವರ ಪಿಡಿಒ ವರ್ಗಾವಣೆ: ಪಂಚಾಯತ್‌ಗೆ ಬೀಗ ಜಡಿದು ಪ್ರತಿಭಟನೆ
ಉಡುಪಿ : ತಮ್ಮ ಅಧಿಕಾರದ ಅವಧಿಯ ಕೇವಲ ಹತ್ತು ದಿನಗಳು ಇರುವಾಗ ಪ್ರಭಾರ ಪಿಡಿಒ ವರ್ಗಾವಣೆ ಮಾಡಿದ್ದಕ್ಕಾಗಿ ಮತ್ತು ಪಂಚಾಯತ್ ಗೆ ಶಾಶ್ವತ ಪಿಡಿಒ ನೀಡುವಂತೆ ಆಗ್ರಹಿಸಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು ಪಕ್ಷಬೇಧ ಮರೆತು ಪಂಚಾಯತ್ ಬೀಗ ತೆರೆಯದಂತೆ ಸೋಮವಾರ ಉದ್ಯಾವರ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ರಮಾನಂದ ಪುರಾಣಿಕ್ ಶಾಶ್ವತ ಪಿಡಿಒ ಇದ್ದು, 4 ತಿಂಗಳ ಹಿಂದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿದ್ದರಿಂದ, ತೆರವಾದ ಅವರ ಸ್ಥಾನಕ್ಕೆ ತಾತ್ಕಾಲಿಕ ನೆಲೆಯಲ್ಲಿ ಕಡೆಕಾರು ಪಂಚಾಯತ್ ಪಿಡಿಒ ಪ್ರವೀಣ್ ಡಿಸೋಜಾರನ್ನು ಉದ್ಯಾವರ ಗ್ರಾಮ ಪಂಚಾಯತಿಗೆ ನೇಮಕ ಮಾಡಲಾಗಿತ್ತು.ಪ್ರವೀಣ್ ಡಿಸೋಜಾರು ಉದ್ಯಾವರ ಗ್ರಾಮ ಪಂಚಾಯತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ, ಇತ್ತೀಚೆಗೆ ಪುನಃ ಅವರ ಸ್ಥಾನಕ್ಕೆ ಅಲೆವೂರು ಗ್ರಾಮ ಪಂಚಾಯತಿ ಪಿಡಿಒ ಸಿದ್ದೇಶ್ ಅವರನ್ನು ನೇಮಿಸಿದ್ದು ಗ್ರಾಪಂ ಸದಸ್ಯರನ್ನು ಕೆರಳಿಸಿತ್ತು. ಪದೇ ಪದೇ ಪಿಡಿಒಗಳ ಬದಲಾವಣೆಯಿಂದ ಗ್ರಾಮ ಪಂಚಾಯತ್ ನಲ್ಲಿ ನಡೆಯುವ ದೈನಂದಿನ ಕೆಲಸಗಳು ವ್ಯವಸ್ಥಿತವಾಗಿ ನಿರ್ವಹಣೆಯಾಗಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ ಮೇ 18 ರಂದು ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಸಾಮಾನ್ಯ ಸಭೆಯಲ್ಲಿ ಸಿದ್ದೇಶ್ ಅವರ ಬದಲಿಗೆ ಪ್ರವೀಣ್ ಡಿಸೋಜಾರನ್ನೇ ಮುಂದುವರೆಸಬೇಕಾಗಿ ಆಗ್ರಹಿಸಿದ್ದಾರೆ. ಅದರಂತೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪಿಡಿಒ ಬಗ್ಗೆ ಗೊಂದಲವಿರುವುದರಿಂದ ಸುಮಾರು 10.30ಕ್ಕೆ ನಡೆಯಬೇಕಾದ ಸಭೆಯು 12.30ಕ್ಕೆ ಆರಂಭವಾಗಿತ್ತು. ಎಲ್ಲಾ 29 ಮಂದಿ ಸದಸ್ಯರು ಮುಂದಿನ ತಮ್ಮ ಅವಧಿ ಮುಗಿಯುವರೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಪ್ರವೀಣ್ ಡಿಸೋಜಾರನ್ನೇ ಮುಂದುವರೆಸುವಂತೆ ನಿರ್ಣಯ ಕೈಗೊಂಡಿದ್ದರು. ಆದರೆ ಶನಿವಾರ ಮತ್ತೆ ಪ್ರವೀಣ್ ಡಿಸೋಜಾ ಬದಲು ಸಿದ್ದೇಶ್ ಅವರನ್ನು ಪಿಡಿಒ ಆಗಿ ಕಳುಹಿಸಿದ್ದು, ಇದರಿಂದ ಆಕ್ರೋಶಗೊಂಡ ಎಲ್ಲಾ ಸದಸ್ಯರು ಈ ಕುರಿತು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಪಕ್ಷಭೇಧ ಮರೆತು ಪಂಚಾಯತ್ ಸದಸ್ಯರ ಅವಧಿ ಮುಗಿಯುವರೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಪ್ರವೀಣ್ ಡಿಸೋಜಾರನ್ನೇ ಮುಂದುವರೆಸುವಂತೆ ಆಗ್ರಹಿಸಿ ಪಂಚಾಯತ್ ಬೀಗ ತೆರೆಯಲು ಅವಕಾಶ ನೀಡದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಹಾಗೂ ತಾಪಂ ಸದಸ್ಯರಾದ ರಜನಿ ಆರ್ ಅಂಚನ್ ಭೇಟಿ ನೀಡಿ ಬೆಂಬಲ ಸೂಚಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಲವು ಬಾರಿ ಸಿಇಒ ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ ಆದರೆ ಸಿಇಒ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮಾತಿಗೆ ಮನ್ನಣೆ ನೀಡಲೇ ಇಲ್ಲ. ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸಿಇಒ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಸದಸ್ಯರು ಮಾತ್ರ ಸಿಇಒ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಸಿಇಒ ತನಗೆ ಹಲವು ಸಭೆಗಳು ಇರುವುದರಿಂದ ಬರಲು ಅಸಾಧ್ಯವಾಗುವುದೆಂದು ತಿಳಿಸಿದ್ದರಿಂದ ಸದಸ್ಯರ ಆಕ್ರೋಶ ಮತ್ತಷ್ಟು ಹೆಚ್ಚಿಸಿತು.