ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜಯಪ್ರಕಾಶ್ ಹೆಗ್ಡೆ
ಹಿರಿಯಡ್ಕ: ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹರಸಾಹಸಪಡುತ್ತಿದ್ದಾರೆ ಎಂದು ಉಡುಪಿ -ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಹಿರಿಯಡ್ಕ ಪ್ರದೇಶದ ವಿವಿಧ ಕೈಗಾರಿಕಾ ಘಟಕಗಳಿಗೆ ಮತ ಯಾಚನೆಗಾಗಿ ಭೇಟಿ ನೀಡಿದ ವೇಳೆ ಅವರು ಈ ವಿಷಯ ಪ್ರಸ್ತಾಪಿಸಿದರು.
ಹೊಸ ಉದ್ದಿಮೆಗಳನ್ನು ಹುಟ್ಟುಹಾಕಿ ಯುವ ಸಮುದಾಯಕ್ಕೆ ಜೀವನ ಭದ್ರತೆ ಕಲ್ಪಿಸಬೇಕಾದ ಕೇಂದ್ರ ಸರ್ಕಾರ ಇದ್ದ ಉದ್ದಿಮೆಗಳನ್ನು ಮುಚ್ಚುವ ಹಾಗೂ ಖಾಸಗೀಕರಣ ಮಾಡಲು ಉತ್ಸಾಹ ತೋರುತ್ತಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಜನರ ಕೆಲಸ ಮಾಡಲು ನನಗೆ ಅವಕಾಶ ದೊರಕಿದ್ದಲ್ಲಿ, ಉಭಯ ಜಿಲ್ಲೆಗಳಲ್ಲಿ ಉದ್ಯೋಗಾವಕಾಶಕ್ಕಾಗಿ ಕೈಗಾರಿಕೋದ್ಯಮದ ಆರಂಭಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದರು.
ಈ ಕ್ಷೇತ್ರದ ಜನಪ್ರತಿನಿಧಿಯಾಗಿ ನಾನು ಆಯ್ಕೆಯಾದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಯ ನೀಲ ನಕಾಶೆ ಮಾಡಲಾಗಿದೆ. ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವುದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಉದ್ದಿಮೆಗಳಿಗೆ ಸರ್ಕಾರದಿಂದ ಯಾವ ರೀತಿಯ ಸೌಲಭ್ಯಗಳನ್ನು ಕಲ್ಪಿಸಬಹುದು ಎನ್ನುವುದನ್ನು ಜನಪ್ರತಿನಿಧಿ ಅರಿತಿರಬೇಕು. ಅವುಗಳನ್ನು ಪಡೆದುಕೊಳ್ಳಲು ಉದ್ದಿಮೆಗಳ ಮಾಲೀಕರೊಂದಿಗೆ ಚರ್ಚಿಸಬೇಕು. ಉದ್ದಿಮೆಗಳ ಅಭಿವೃದ್ಧಿಗೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಎಲ್ಲರಿಗೂ ಸಮಾನವಾಗಿ ಸೌಲಭ್ಯಗಳು ದೊರಕುತ್ತಿತ್ತು. ಆದರೆ ಪ್ರಸ್ತುತ ಇರುವ ಬಿಜೆಪಿ ನೇತೃತ್ವದ ಸರ್ಕಾರದಿಂದ ಕೇವಲ ಬೃಹತ್ ಉದ್ದಿಮೆಗಳಿಗೆ ಮಾತ್ರ ಸೌಲಭ್ಯಗಳು ದೊರೆಯುತ್ತಿರುವುದು ಬೇಸರದ ಸಂಗತಿ ಎಂದರು.
ಬಡವರ ಸಾಲ ಮನ್ನಾ ಮಾಡಿದರೆ, ಜೀವನ ಕಟ್ಟಿಕೊಳ್ಳಲು ಸಹಾಯ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸುವವರು, ಶ್ರೀಮಂತರ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವುದಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡಲಾಗುವುದು ಎಂದು ಹೇಳಿಕೊಂಡು ಗೆದ್ದು ಅಧಿಕಾರಕ್ಕೆ ಬಂದವರು, ಕಳೆದ ಹತ್ತು ವರ್ಷಗಳಲ್ಲಿ ನುಡಿದಂತೆ ನಡೆದಿದ್ದರೆ, ಈವರೆಗೆ ದೇಶದಲ್ಲಿ 20 ಕೋಟಿ ಯುವ ಸಮುದಾಯಕ್ಕೆ ಉದ್ಯೋಗ ಸಿಕ್ಕಿರುತ್ತಿತ್ತು. ವೈಯಕ್ತಿಕವಾಗಿ ಸಾಲ ಮಾಡಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಆದರೆ ಈಗಿನ ಕಾರ್ಖಾನೆ ಪರಿಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಅಲ್ಲಿಯ ಗುಜರಿಯನ್ನೂ ಬಿಡದೆ ನಾಶ ಮಾಡಿದರು. ಮುಂದೆ ಅವಕಾಶ ದೊರಕಿದ್ದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಜಾಗದಲ್ಲಿ ಸಣ್ಣ ಕೈಗಾರಿಕೆಗಳಿಗೆ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದು ಜಯಪ್ರಕಾಶ್ ಹೆಗ್ಡೆ ನುಡಿದರು.
ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಎಡೆಬಿಡದೆ ಹೋರಾಟ ಮಾಡುವ ಉತ್ತಮ ಅಭ್ಯರ್ಥಿಯಾದ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದೆ. ಜನಪರ ಯೋಜನೆಗಳನ್ನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಹೆಗ್ಡೆ ಶ್ರಮಿಸುತ್ತಾರೆ ಅವರು ಮತ ಕೇಳುವಾಗ ಧರ್ಮ, ಜಾತಿಗಳ ಬಗ್ಗೆ ಮಾತನಾಡದೆ ತನ್ನ ಅಧಿಕಾರದ ಹಾಗೂ ಅಧಿಕಾರ ಇಲ್ಲದ ದಿನಗಳ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು, ಮುಂದೆ ನಾನೇನು ಮಾಡುತ್ತೇನೆ ಎನ್ನುವುದನ್ನು ತಿಳಿಸಿ ಮತ ಯಾಚಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಜಯಪ್ರಕಾಶ್ ಹೆಗ್ಡೆ ಅವರನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದರು.