ಮುಂದುವರಿದ ವ್ಯಾಪಕ ಮಳೆ: 4 ಮಂಗಳೂರು-ದುಬೈ ವಿಮಾನಗಳು ರದ್ದು, ಪ್ರಯಾಣಿಕರಿಗೆ ತೊಂದರೆ

ಮಂಗಳೂರು: ಕಳೆದ 48 ಗಂಟೆಗಳಲ್ಲಿ ದುಬೈ ಮತ್ತು ನೆರೆಯ ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಮಂಗಳೂರು- ದುಬೈ ಮಾರ್ಗದ ನಾಲ್ಕು ವಿಮಾನಗಳನ್ನು ಬುಧವಾರ ರದ್ದುಗೊಳಿಸಲಾಯಿತು.

ತಿರುಚಿರಾಪಳ್ಳಿಯಿಂದ ಮಂಗಳೂರು ಮಾರ್ಗದ ಮತ್ತೊಂದು ವಿಮಾನವನ್ನು ಸಹ ರದ್ದು ಗೊಳಿಸಲಾಗಿದೆ. ಇಲ್ಲಿಂದ ಜೆಡ್ಡಾಕ್ಕೆ ತೆರಳುವ ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರದ್ದುಗೊಳಿಸಲಾದ ವಿಮಾನಗಳು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಂಪನಿಗೆ ಸೇರಿದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ಫ್ಲೈಟ್ ನಂಬರ್​ 814, ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಫ್ಲೈಟ್ ನಂಬರ್​ 813, ದುಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ವಿಮಾನ 384 ಮತ್ತು ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಫ್ಲೈಟ್ ನಂಬರ್​ 383 ಅನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಮಂಗಳೂರಿನಿಂದ ಜಿದ್ದಾಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ವಿಳಂಬವಾಗಿದೆ. ಮತ್ತೊಂದೆಡೆ, ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಗುರುವಾರವೂ ರದ್ದುಗೊಳಿಸಲಾಗಿದೆ. ಜೆಡ್ಡಾದಿಂದ ಮಂಗಳೂರಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಖ್ಯೆ 796 ಮತ್ತು ಮಂಗಳೂರಿನಿಂದ ತಿರುಚಿರಾಪಳ್ಳಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೂಡಾ ವಿಳಂಬವಾಗಲಿದೆ.

ಏಪ್ರಿಲ್ 15 ರ ಮಧ್ಯರಾತ್ರಿಯಿಂದ, ದುಬೈನ ಅನೇಕ ಸ್ಥಳಗಳಲ್ಲಿ ಭಾರೀ ನೀರು ನಿಂತಿದ್ದು, ನಿಯಮಿತ ಚಟುವಟಿಕೆಗಳು ಮತ್ತು ವಿಮಾನ ಪ್ರಯಾಣವನ್ನು ಅಡ್ಡಿಪಡಿಸಿದೆ. ದುಬೈನಲ್ಲಿ ಮಂಗಳವಾರ ಕೇವಲ 12 ಗಂಟೆಗಳಲ್ಲಿ ದಾಖಲೆಯ 100 ಮಿಮೀ ಮಳೆಯಾಗಿದೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!