ಸಾರ್ವಜನಿಕವಾಗಿ ಕ್ಷಮೆಯಾಚಿಸಲು ರಾಮದೇವ್, ಬಾಲಕೃಷ್ಣಗೆ ಒಂದು ವಾರ ಕಾಲಾವಕಾಶ- ಸುಪ್ರೀಂ ಕೋರ್ಟ್
ಹೊಸದಿಲ್ಲಿ: ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಕೇಸ್ ಎದುರಿಸುತ್ತಿರುವ ಪತಂಜಲಿ ಸಂಸ್ಥಾಪಕರಾದ ಯೋಗ ಗುರು ರಾಮದೇವ್ ಮತ್ತು ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸುಪ್ರೀಂ ಕೋರ್ಟ್ ಇಂದು ಒಂದು ವಾರ ಕಾಲಾವಕಾಶ ನೀಡಿದೆ.
ಇಂದಿನ ವಿಚಾರಣೆ ವೇಳೆ ರಾಮದೇವ್ ಮತ್ತು ಬಾಲಕೃಷ್ಣ ಇಬ್ಬರೂ ಮತ್ತೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದಿನ್ ಅಮಾನುಲ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಕ್ಷಮೆಯಾಚಿಸಿದರು.
ಆಧುನಿಕ ವೈದ್ಯಕೀಯ ಪದ್ಧತಿಯ ವಿರುದ್ಧ ಅಪಪ್ರಚಾರ ಆರೋಪ ಎದುರಿಸುತ್ತಿರುವ ರಾಮದೇವ್, “ಆ ಹಂತದಲ್ಲಿ ನಾವು ಮಾಡಿದ್ದನ್ನು ಮಾಡಬಾರದಾಗಿತ್ತು. ಇದನ್ನು ಭವಿಷ್ಯದಲ್ಲಿ ನೆನಪಿಟ್ಟುಕೊಳ್ಳುತ್ತೇವೆ,” ಎಂದು ಸುಪ್ರೀಂ ಕೋರ್ಟ್ ಮುಂದೆ ಹೇಳಿದರು.