ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು : ಶ್ಯಾಮಲ ಕುಂದರ್

ಉಡುಪಿ, ಅ. 23 : ಮಹಿಳೆಯರು ಮತ್ತು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಸ್ವ-ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳನ್ನಾಗಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಕುಂದರ್ ಹೇಳಿದರು.


ಅವರು, ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು, ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳು ಪ್ರತಿಶತ 100 ರಷ್ಟು ಅನುಷ್ಠಾನವಾಗಬೇಕು ಎಂದು ತಿಳಿಸಿದರು.


ದೌಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳು ತಮಗಾದ ಅನ್ಯಾಯದ ಬಗ್ಗೆ ದೂರು ಯಾವ ಪ್ರಾಧಿಕಾರಕ್ಕೆ ನೀಡಬೇಕೆಂಬ ಅರಿವನ್ನು ಮೂಡಿಸಬೇಕು, ಅವರಿಗೆ ಸಾಂತ್ವನ ಹೇಳುವುದರ ಜೊತೆಗೆ ಧೈರ್ಯ ತುಂಬಿ ಕಾನೂನಿನ ನೆರವನ್ನು ಒದಗಿಸಬೇಕೆಂದು ಸಹ ಹೆಳಿದರು. ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಯಲು ಎಲ್ಲಾ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅಂತರಿಕ ದೂರು ಸಮಿತಿಗಳನ್ನು ರಚಿಸಬೇಕು, ಈ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಬೇಕು ಎಂದರು.


ಲಾಕ್‍ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳು, ವಲಸೆ ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು. ಸೈಬರ್ ಕ್ರೈಮ್ ಕುರಿತಂತೆ ಮಹಿಳೆಯರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು ಮತ್ತು ಈ ರೀತಿಯ ಅಪರಾಧಗಳಿಗೆ ಬಲಿಯಾಗದಂತೆ ಹೇಗೆ ಪಾರಾಗಬೇಕು ಎಂಬ ಬಗ್ಗೆ ಕಿರುಪುಸ್ತಕ ಮುದ್ರಿಸಿ ವಿತರಿಸಬೇಕು, ಮಾದಕ ವಸ್ತುಗಳಿಗೆ ವಿದ್ಯಾರ್ಥಿನಿಯರು ಬಲಿಯಾಗದಂತೆ ಅರಿವು ಕಾರ್ಯಕ್ರಮಗಳು ಮತ್ತು ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ತಪಾಸಣೆ ನಡೆಸಬೇಕು ಎಂದರು.


ಜಿಲ್ಲೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್‍ನಲ್ಲಿ ಡಿಸೆಂಬರ್ 19 ರಿಂದ ಆಗಸ್ಟ್‍ವರೆಗೆ 28 ಪ್ರಕರಣಗಳು ದಾಖಲಾಗಿದ್ದು, 16 ಪ್ರಕರಣ ಇತ್ಯರ್ಥಗೊಂಡಿದ್ದು, 7 ನ್ಯಾಯಾಲಯ ಹಂತದಲ್ಲಿ ಮತ್ತು 1 ಸಮಾಲೋಚನೆ ಹಂತದಲ್ಲಿದೆ. ಕೌಟುಂಬಿಕ ದೌರ್ಜನ್ಯ ಸಂರಕ್ಷಣೆ ಕಾಯ್ದೆಯಡಿ 2020-21 ರಲ್ಲಿ 8 ಪ್ರಕರಣಗಳು ದಾಖಲಾಗಿದ್ದು 5 ಪ್ರಕರಣಗಳು
ಸಮಾಲೋಚನೆಯಿಂದ ಇತ್ಯರ್ಥಗೊಂಡಿದ್ದು, 3 ಪ್ರಕರಣ ಬಾಕಿ ಇದೆ. ಅಭಯ ನಿಧಿಯಡಿ ಒಂದು ಪ್ರಕರಣದಲ್ಲಿ 25000 ಮತ್ತು 2 ಪ್ರಕರಣದಲ್ಲಿ ತಲಾ 5000 ದಂತೆ ಪರಿಹಾರ ವಿತರಿಸಿದೆ. ಮಾತೃ ವಂದನ ಯೋಜನೆಯಡಿ ಇದುವರೆಗೆ 23865 ಫಲಾನುಭವಿಗಳಿಗೆ 10.20 ಕೋಟಿ ವೆಚ್ಚ ಮಾಡಿದ್ದು, ಈ ವರ್ಷ ಇದುವರೆಗೆ 4286 ಫಲಾನುಭವಿಗಳಿಗೆ 1.54 ಕೋಟಿ ನೀಡಲಾಗಿದೆ ಎಂದರು.


ಜಿಲ್ಲೆಯಲ್ಲಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!