ಉಡುಪಿ: ಎ.21 ರಂದು ಇನ್‌ಫೋಸಿಸ್ ಯಕ್ಷಗಾನ ಕೇಂದ್ರ ಉದ್ಘಾಟನೆ
ಉಡುಪಿ, ಎ.15: ಬೆಂಗಳೂರಿನ ಇನ್‌ಫೋಸಿಸ್ ಫೌಂಡೇಷನ್ 15.8 ಕೋಟಿ ರೂ. ವೆಚ್ಚದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಮೂಲಕ ನಿರ್ಮಿಸಿದ ಇನಫೋಸಿಸ್ ಫೌಂಡೇಷನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟ್ (ಐವೈಸಿ)ಯ ನೂತನ ಕಟ್ಟಡದ ಲೋಕಾರ್ಪಣೆ ಎ.21ರ ಮುಂಜಾನೆ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ತಿಳಿಸಿದ್ದಾರೆ.
ಇನ್‌ಫೋಸಿಸ್ ಯಕ್ಷಗಾನ ಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡದಲ್ಲಿ 380 ಮಂದಿ ಕುಳಿತು ವೀಕ್ಷಿಸಬಹುದಾದ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸಭಾಂಗಣ, ಗ್ರೀನ್‌ರೂಮ್, ಕಾನ್ಫರೆನ್ಸ್ ಹಾಲ್, ಬೋರ್ಡ್ ರೂಮ್ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆ ನಡೆಯಲು ಬೇಕಾದ ಎಲ್ಲಾ ಸೌಲಭ್ಯಗಳು ಉಚಿತವಾಗಿ ದೊರೆಯಲಿವೆ ಎಂದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಮಾತನಾಡಿ, ಕಲಾರಂಗ ಖರೀದಿಸಿದ 35 ಸೆನ್ಸ್ ಜಾಗದಲ್ಲಿ ಈ ಭವ್ಯ ಕಟ್ಟಡ ತಲೆ ಎತ್ತಿದೆ. ಯಕ್ಷಗಾನ ಕಲಾರಂಗ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ವರ್ಷ ದಲ್ಲೇ ಈ ಕಟ್ಟಡ ಉದ್ಘಾಟನೆಗೊಳ್ಳುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಕಟ್ಟಡದ ಉದ್ಘಾಟನಾ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿವೆ.ಎ.21ರಂದು ಬೆಳಗ್ಗೆ 9ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಸುಶ್ರೀಂದ್ರತೀರ್ಥರ ಅನುಗ್ರಹ ಮಂತ್ರಾಕ್ಷತೆಯೊಂದಿಗೆ ಯಕ್ಷಗಾನ ಪರಿಕರಗಳೊಂದಿಗೆ ಮೆರವಣಿಗೆಯಲ್ಲಿ ನೂತನ ಕಟ್ಟಡ ಪ್ರದೇಶಕ್ಕೆ ಆಗಮಿಸಲಾಗುವುದು ಎಂದರು.
ಬೆಳಗ್ಗೆ 10ಗಂಟೆಗೆ ಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಪಲಿಮಾರು ಮಠದಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥರ ನೂತನ ಕಟ್ಟಡದ ದ್ವಾರಪೂಜೆ ನೆರವೇರಿಸಲಿದ್ದಾರೆ ಎಂದರು.
ಅಪರಾಹ್ನ 3:30ಕ್ಕೆ ಕಲಾರಂಗ-ಐವೈಸಿ ಸಭಾಂಗಣದಲ್ಲಿ ಕಟ್ಟಡವನ್ನು ಇನ್‌ಫೋಸಿಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಇನ್‌ಫೋಸಿಸ್ ಫೌಂಡೇಷನ್‌ನ ವಿಶ್ವಸ್ಥ ಸುನಿಲ್ ಕುಮಾರ್ ಧಾರೇಶ್ವರ್ ಉದ್ಘಾಟಿಸಲಿದ್ದಾರೆ.ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ.ಜಿ. ಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾನಿ.ಬಿ. ವಿಜಯ ಬಲ್ಲಾಳ್ ಶುಭಾಶಂಸನೆ ಮಾಡುವರು. ಉದ್ಯಮಿ ರಮೇಶ್ಚಂದ್ರ ಹೆಗ್ಡೆ ಉಪಸ್ಥಿತರಿರುವರು ಎಂದರು.
ಬಳಿಕ ನೂತನ ಸಭಾಂಗಣದಲ್ಲಿ ಕೃಷ್ಣಸ್ಯ ವರ್ಣಾನಿ ಇವರಿಂದ ಒಡಿಸ್ಸಿ ನೃತ್ಯ ಪ್ರದರ್ಶನವಿರುತ್ತದೆ. ವಸಂತೋತ್ಸವದ ಎರಡನೇ ದಿನವಾದ ಎ.22ರಂದು ಸಂಜೆ 5ಗಂಟೆಗೆ ಬಬ್ಬು ಮಾಯಗಾರ ಕಥನ ಶ್ರವಣ ಹಾಗೂ 6ರಿಂದ ಕೇರಳದ ಕಲಾಮಂಡಲಂ ಬಳಗದಿಂದ ಕಥಕಳಿ ಪ್ರದರ್ಶನ ನಡೆಯಲಿದೆ ಎಂದರು.
ಎ.23ರಂದು ವಸಂತೋತ್ಸವದಲ್ಲಿ ಸಂಜೆ 5ರಿಂದ ಮಾತಿನ ಮಂಟಪ ತಾಳಮದ್ದಲೆ, ಬಳಿಕ ಯಕ್ಷ ಶಿಕ್ಷಣದ ಕಿಶೋರರಿಂದ ಯಕ್ಷಗಾನ ಪ್ರದರ್ಶನ ವಿರುತ್ತದೆ ಎಂದು ಮುರಲಿ ಕಡೆಕಾರು ತಿಳಿಸಿದರು.
ಇದಕ್ಕೆ ಪೂರ್ವಭಾವಿಯಾಗಿ ಎ.20ರಂದು ಬೆಳಗ್ಗೆ ಉದ್ಯಮಿ ಪಿ.ಪುರುಷೋತ್ತಮ ಶೆಟ್ಟಿ ಇವರು ತಮ್ಮ ತಾಯಿಯ ನೆನಪಿ ನಲ್ಲಿ ವಿದ್ಯಾಪೋಷಕ್‌ನ ಬಡ ವಿದ್ಯಾರ್ಥಿನಿಗೆ ಚೇರ್ಕಾಡಿಯಲ್ಲಿ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆ ನಡೆಯಲಿದೆ. ಇದು ಯಕ್ಷಗಾನ ಕಲಾರಂಗದ ಮೂಲಕ ದಾನಿಗಳ ನೆರವಿನಿಂದ ನಿರ್ಮಿಸಿದ 52ನೇ ಮನೆಯಾಗಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ಪ್ರೊ.ನಾರಾಯಣ ಹೆಗಡೆ, ವಿಜಯ ಕುಮಾರ್ ಶೆಟ್ಟಿಗಾರ್, ಪ್ರೊ.ಸದಾಶಿವ ರಾವ್, ಬಿ.ಜಿ.ಶೆಟ್ಟಿ, ಅಶೋಕ ಎಂ., ಅನಂತರಾಜ್ ಉಪಾಧ್ಯ ಉಪಸ್ಥಿತರಿದ್ದರು.