ಬ್ರಹ್ಮಾವರ: ಎ.18 ಮೆಕ್ಕೆಕಟ್ಟು ದೇವಸ್ಥಾನದಲ್ಲಿ ಯೋಗ ಮಹೋತ್ಸವ
ಉಡುಪಿ: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಭಾರತ್ ಸರಕಾರದ ಆಯುಷ್ ಮಂತ್ರಾಲಯದ ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಎ.18ರ ಮುಂಜಾನೆ 6 ಗಂಟೆಗೆ ಬ್ರಹ್ಮಾವರ ತಾಲೂಕಿನ ಮೆಕ್ಕೆಕಟ್ಟು ಶ್ರೀನಂದಿಕೇಶ್ವರ ದೇವಸ್ಥಾನದ ಆವರಣದಲ್ಲಿ ಯೋಗ ಮಹೋತ್ಸವನ್ನು ಆಯೋಜಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶೆಟ್ಟಿ, ಇದೇ ಜೂನ್ 21ರಂದು ವಿಶ್ವದಾದ್ಯಂತ ನಡೆ ಯುವ 10ನೇ ವರ್ಷದ ವ್ವಿ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ 100 ದಿನಗಳ ಮುಂಚಿತವಾಗಿ ಭಾರತದ 100 ಆಯ್ದ ಅಗ್ರಗಣ್ಯ ಯೋಗ ಸಂಸ್ಥೆಗಳಿಂದ ದೇಶದ 100 ಐತಿಹಾಸಿಕ ಸ್ಥಳಗಳಲ್ಲಿ ಒಂದು ದಿನದ ಯೋಗ ಪ್ರಾತ್ಯಕ್ಷಿಕೆ ಹಾಗೂ ಯೋಗಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ತಜ್ಞರ ಮೂಲಕ ಆಯೋಜಿಸುವ ಕಾರ್ಯಾಗಾರದಲ್ಲಿ ನೀಡಲಾಗುತ್ತದೆ ಎಂದರು.
10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂ.21ಕ್ಕೆ ಯೋಗದಿಂದ ಮಹಿಳಾ ಸಬಲೀಕರಣ ಎಂಬ ಉದ್ದೇಶದೊಂದಿಗೆ ನಡೆಸ ಲಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಗದ ಮಹತ್ವದ ಕುರಿತು ಜನರಿಗೆ ಮಾಹಿತಿ ನೀಡಲು ಅಲ್ಲಲ್ಲಿ ಯೋಗ ಶಿಬಿರಗಳನ್ನು ನಮ್ಮ ಸಂಸ್ಥೆ ಆಯೋಜಿಸಿದೆ ಎಂದೂ ಡಾ.ಶೆಟ್ಟಿ ವಿವರಿಸಿದರು.
ಎ.18ರಂದು ನಡೆಯುವ ಯೋಗ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಕಳೆದೊಂದು ವಾರದಿಂದ ಪರಿಸರದ ಶಿರಿಯಾರ, ಬಿದ್ಕಲ್‌ಕಟ್ಟೆ, ಬಾರಕೂರು ಹಾಗೂ ಮಂದಾರ್ತಿಗಳಲ್ಲಿ ಯೋಗ ಶಿಬಿರಗಳು ನಡೆಯುತ್ತಿದೆ. ಇವುಗಳಿಂದ ಆಯ್ದ ಮಂದಿ ಸೇರಿದಂತೆ ಸುಮಾರು 500 ಮಂದಿ ಎ.18ರ ಯೋಗ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಯೋಗ ಮಹೋತ್ಸವವನ್ನು ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಎ.18ರ ಮುಂಜಾನೆ 7ಗಂಟೆಗೆ ಉದ್ಘಾಟಿಸಲಿದ್ದಾರೆ. ಮಣಿಪಾಲ ಕೆಎಂಸಿಯ ಮೈಕ್ರೋಬಯಾಲಜಿ ವಿಭಾಗದ ಪ್ರೊಪೆಸರ್ ಡಾ. ಮಮತಾ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಜಿರೆ ಎಸ್‌ಡಿಎಂಇ ಸೊಸೈಟಿಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರು ಉಪಸ್ಥಿತರಿರುವರು ಎಂದರು.
ಉದ್ಘಾಟನೆಯ ಬಳಿಕ ಯೋಗ ಪ್ರಾತ್ಯಕ್ಷಿಕೆ ನಡೆಯಲಿದ್ದು, ಬೆಳಗ್ಗೆ 10ರಿಂದ ಯೋಗ ಕಾರ್ಯಾಗಾರ ಪ್ರಾರಂಭಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಮತಾ ಕೆ.ವಿ., ಪರ್ಕಳ ಪರೀಕಾದ ಎಸ್‌ಡಿಎಂವೈಎನ್‌ಎಚ್‌ನ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ, ಹೂಡೆಯ ಬೀಚ್ ಹೀಲಿಂಗ್ ಹೋಮ್‌ನ ನಿರ್ದೇಶಕ ಡಾ. ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.