ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್’ನಿಂದ ಮಿಸೈಲ್ ದಾಳಿ- ಪರಿಸ್ಥಿತಿ ಉದ್ವಿಗ್ನ
ಇರಾನ್ ಇಸ್ರೇಲಿನ ಮೇಲೆ ಡಜನ್‌ಗಟ್ಟಲೆ ಡ್ರೋನ್ ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ. ಇಸ್ರೇಲ್ ದಾಳಿಗೆ ಪ್ರತಿಯಾಗಿ ಟೆಹ್ರಾನ್ ದಾಳಿಯನ್ನು ಪ್ರಾರಂಭಿಸಿದೆ ಎಂದು ಇಸ್ರೇಲ್ ಹೇಳಿದ ನಂತರ ದೇಶದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ದಾಳಿಯನ್ನು ದೃಢಪಡಿಸಿದೆ.
“ಟ್ರೂ ಪ್ರಾಮಿಸ್” ಕಾರ್ಯಾಚರಣೆಯ ಅಡಿಯಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಐಆರ್‌ಜಿಸಿ ಶನಿವಾರ ಹೇಳಿದೆ.ಈ ಕ್ರಮವು “ಇಸ್ರೇಲಿ ಅಪರಾಧಗಳಿಗೆ” ಶಿಕ್ಷೆಯ ಭಾಗವಾಗಿದೆ ಎಂದು ಹೇಳಿದೆ.
ಈ ದಾಳಿಯಲ್ಲಿ ಇಸ್ರೇಲ್’ಗೆ ಆದ ಹಾನಿಯ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ಅಮೆರಿಕ ಕೂಡಾ, ಇಸ್ರೇಲ್ ಮೇಲೆ ಡ್ರೋನ್ ದಾಳಿ ನಡೆದಿರುವುದನ್ನು ದೃಢಪಡಿಸಿದೆ. ಇಸ್ರೇಲ್ ಮೇಲೆ ಇರಾನ್ ವಾಯುದಾಳಿಯನ್ನು ಆರಂಭಿಸಿದ್ದು, ಇದು ಹಲವು ಗಂಟೆಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ ಎಂದು ಶ್ವೇತಭವನ ಹೇಳಿದೆ.
ಅಧ್ಯಕ್ಷ ಜೋ ಬೈಡನ್ ಅವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರು ಈ ಬಗ್ಗೆ ನಿಯತವಾಗಿ ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಎಡ್ರಿಯೇನ್ ವಾಟ್ಸನ್ ಹೇಳಿದ್ದಾರೆ. ಅಧ್ಯಕ್ಷರು ಇಸ್ರೇಲ್ ಅಧಿಕಾರಿಗಳ ಹಾಗೂ ಅಮೆರಿಕದ ಮಿತ್ರರಾಷ್ಟ್ರಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಇರಾನ್ ನ ಸರ್ವೋಚ್ಛ ನಾಯಕ ಆಯಾತುಲ್ಲಾ ಅಲಿ ಖಮೇನಿ ಎಕ್ಸ್ ಪೋಸ್ಟ್ ನಲ್ಲಿ ಇಸ್ರೇಲಿ ಆಡಳಿತವನ್ನು “ದುರುದ್ದೇಶಪೂರಿತ” “ದುಷ್ಟ” ಹಾಗೂ “ಲೋಪಯುಕ್ತ” ಎಂದು ಹೇಳಿದ್ದಾರೆ.