ಕ್ಯೂಎಸ್ ವಿಶ್ವ ವಿವಿ ರ‍್ಯಾಂಕಿಂಗ್‌ನಲ್ಲಿ 51 ಸ್ಥಾನ ಮೇಲಕ್ಕೆ ನೆಗೆದ ಮಾಹೆ
ಉಡುಪಿ, ಎ.14: 2024ನೇ ಸಾಲಿನ ಕ್ವಾಕ್ವರಲಿ ಸಿಮಾಂಡ್ಸ್ ವಿಶ್ವ ವಿವಿ ರ್ಯಾಂಕಿಂಗ್ ಪಟ್ಟಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಕಳೆದ ಬಾರಿಗಿಂತ ಮೇಲ್ಮಟ್ಟದ ಸಾಧನೆ ತೋರಿದೆ. ಲೈಫ್ ಸಾಯನ್ಸ್ ಹಾಗೂ ಮೆಡಿಸಿನ್ ವಿಭಾಗದ ಮೂರು ವಿಷಯಗಳಲ್ಲಿ -ದಂತವೈದ್ಯಕೀಯ, ಅಂಗರಚನಾ ಶಾಸ್ತ್ರ (ಅನಾಟಮಿ) ಹಾಗೂ ಶರೀರ ಶಾಸ್ತ್ರ (ಪಿಸಿಯಾಲಜಿ) ವಿಷಯಗಳು- ಮಾಹೆ ಗಮನಾರ್ಹ ಸಾಧನೆ ಮಾಡಿದೆ ಎಂದು ಮಾಹೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಲೈಫ್ ಸಾಯನ್ಸ್ ಹಾಗೂ ಮೆಡಿಸಿನ್‌ನಲ್ಲಿ 2023ರಲ್ಲಿ 368ನೇ ಶ್ರೇಯಾಂಕ ಹೊಂದಿದ್ದ ಮಾಹೆ, 2024ರಲ್ಲಿ 317ನೇ ಸ್ಥಾನಗಳಿಸಿದ್ದು 51 ಸ್ಥಾನ ಮೇಲಕ್ಕೇರಿದೆ. ಮೆಡಿಸಿನ್‌ನಲ್ಲಿ ಕಳೆದ ಬಾರಿ 251-300ನೇ ಕೆಟಗರಿಯಲ್ಲಿದ್ದ ಮಾಹೆ ಈ ಬಾರಿ ಒಂದು ಹಂತ ಮೇಲಕ್ಕೆ ನೆಗೆದು 201-250ನೇ ಕೆಟಗರಿಯಲ್ಲಿ ಸ್ಥಾನ ಪಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶ್ವದಾದ್ಯಂತ 150 ವಿವಿಗಳು ರ್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದು, ಅನಾಟಮಿ ಹಾಗೂ ಪಿಸಿಯಾಲಜಿ ವಿಷಯಗಳಲ್ಲಿ ಶ್ರೇಯಾಂಕ ಪಡೆದ ಭಾರತದ ಏಕೈಕ ವಿವಿ ಮಾಹೆಯಾಗಿದೆ. ಡೆಂಟಿಸ್ಟ್ರಿಯಲ್ಲೂ 100 ವಿವಿಗಳು ರ್ಯಾಂಕಿಂಗ್ ಪಡೆದಿದ್ದು, ಭಾರತದಿಂದ ಇದರಲ್ಲಿ ಶ್ರೇಯಾಂಕ ಪಡೆದ ಎರಡು ವಿವಿಗಳಲ್ಲಿ ಮಾಹೆ ಒಂದಾಗಿದೆ.
ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ವಿಭಾಗದ ಕಂಪ್ಯೂಟರ್ ಸಾಯನ್ಸ್ ಹಾಗೂ ಇನ್‌ಫಾರ್ಮೇಷನ್ ಸಿಸ್ಟಮ್ ವಿಷಯಗಳಲ್ಲಿ ಕಳೆದ ಬಾರಿ 651-680 ರಲ್ಲಿದ್ದ ಮಾಹೆ ಈ ಬಾರಿ 601-650 ಕೆಟಗರಿಯೊಳಗೆ ಸ್ಥಾನ ಪಡೆದಿದೆ.
ಲೈಫ್ ಸಾಯನ್ಸ್ ಮತ್ತು ಮೆಡಿಸಿನ್ ವಿಭಾಗದ ಅನಾಟಮಿ ಮತು ಪಿಸಿಯಾಲಜಿ ವಿಷಯಗಳಲ್ಲಿ 101-150 ಕೆಟಗರಿಯಲ್ಲಿ, ಬಯಾಲಜಿಕಲ್ ಸಾಯನ್ಸ್‌ನಲ್ಲಿ 451-500 ಕೆಟಗರಿ, ಡೆಂಟಿಸ್ಟ್ರಿಯಲ್ಲಿ 51-100ರ ಕೆಟಗರಿಯಲ್ಲಿ ಮಾಹೆ ಸ್ಥಾನ ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.
ಕ್ಯೂಎಸ್ ವಿಶ್ವ ವಿವಿ ರ್ಯಾಂಕಿಂಗ್‌ನ 20ನೇ ಆವೃತ್ತಿಯಲ್ಲಿ 104 ದೇಶಗಳ 1,500ಕ್ಕೂ ಅಧಿಕ ವಿವಿ ಹಾಗೂ ವಿದ್ಯಾ ಸಂಸ್ಥೆಗಳು ಭಾಗವಹಿಸಿದ್ದವು ಎಂದು ಪ್ರಕಟಣೆ ವಿವರಿಸಿದೆ.