ಮಂಗಳೂರು: ಕೇಂದ್ರ ಸರಕಾರ, ಪ್ರಧಾನಿ ಮೋದಿ ನಿಲುವು ವಿರೋಧಿಸಿ ಪ್ರತಿಭಟನೆ
ಮಂಗಳೂರು: ರಾಜ್ಯಕ್ಕೆ ನೀಡಬೇಕಾದ ತೆರಿಗೆಯಲ್ಲಿ ವಂಚನೆ, ಜಿಎಸ್‌ಟಿಯಲ್ಲಿ ಮೋಸ, ಪ್ರವಾಹ ಮತ್ತು ಬರ ಪರಿಹಾರದ ಸಹಾಯ ಅನುಧಾನವನ್ನು ನೀಡದೇ ವಂಚನೆ ಮಾಡಿ ಅನ್ಯಾಯ ಮಾಡಿರುವ ಕೇಂದ್ರ ಬಿಜೆಪಿ ಸರಕಾರದ ನಿಲುವು ಖಂಡಿಸಿ ಹಾಗೂ ಪ್ರಧಾನಿ ಮೋದಿ ನಡೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಶನಿವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರು ಕಳೆದ ಐದು ವರ್ಷಗಳಲ್ಲಿ ರಾಜ್ಯ ತೀವ್ರ ಬರ ಪರಿಸ್ಥಿತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ರಾಜ್ಯದ ಸಮಸ್ಯೆಗಳ ಕಡೆಗೆ ಒಮ್ಮೆಯೂ ಗಮನ ಹರಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ರಾಜ್ಯಕ್ಕೆ ಯಾವ ಉದ್ದೇಶಕ್ಕಾಗಿ ಬರುತ್ತಿದ್ದಾರೆ ಎಂದು ಪ್ರಶ್ನಿದರು.
‘ಗೋ ಬ್ಯಾಕ್ ಮೋದಿ’ ಎಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ ಸೋಜ ಅವರು ರಾಜ್ಯ ನೆರೆ, ಬರ, ಕೋವಿಡ್ ಸಮಸ್ಯೆ ಎದುರಿಸುತ್ತಿದ್ದಾಗ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿಲ್ಲ. ಈಗ ಯಾವ ಕಾರಣಕ್ಕಾಗಿ ಇಲ್ಲಿಗೆ ಬರುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ರಾಜಕೀಯ ಉದ್ದೇಶಕ್ಕಾಗಿ ರಾಜ್ಯಕ್ಕೆ ಬರುತ್ತಿದ್ದಾರೆ. ಕನ್ನಡಿಗರ ಹಿತಕಾಯಲು ಅವರು ಬರುತ್ತಿಲ್ಲ. ಹೀಗಾಗಿ ನಾವೆಲ್ಲ ಒಗ್ಗಟ್ಟಾಗಿ ಕೇಳುತ್ತಿದ್ದೇವೆ ‘ನರೇಂದ್ರ ಮೋದಿ ಹಿಂದಕ್ಕೆ ಹೋಗಿ’ ಎಂದು ಐವನ್ ಡಿ ಸೋಜ ಹೇಳಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿದೆ ಎಂಬ ಭೀತಿಯಿಂದ ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಕರ್ನಾಟಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು. ರಾಜ್ಯಕ್ಕೆ 17,901 ಕೋಟಿ ರೂ. ಬರ ಪರಿಹಾರ ನೀಡಬೇಕಿದ್ದರೂ ಯಾಕೆ ಕೊಟ್ಟಿಲ್ಲ. 223 ಬರಪೀಡಿತ ತಾಲೂಕುಗಳೆಂದು ಘೋಷಣೆಯಾಗಿತ್ತು. 33,770 ಕೋಟಿ ರೂ. ನಷ್ಟ ಸಂಭವಿಸಿತ್ತು, ರಾಷ್ಟ್ರೀಯ ವಿಪತ್ತು ನಿಧಿಯಿಂದ 18,177 ಕೋಟಿ ರೂ. ಪರಿಹಾರ ನೀಡಬೇಕಿದ್ದರೂ ನಯಾಪೈಸೆ ಬಿಡುಗಡೆಯಾಗಿಲ್ಲ. ಕೇಂದ್ರ ಸರಕಾರ ರಾಜ್ಯದ ಜನರನ್ನು ಸತಾಯಿಸುತ್ತಾ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದೆ. 123 ವರ್ಷಗಳ ಕಾಲ ಕಂಡಿರದ ಭೀಕರ ಬರಗಾಲವನ್ನು ರಾಜ್ಯ ಎದುರಿಸುತ್ತಿದೆ. ಶೇ. 49ರಷ್ಟು ಬೆಳೆ ನಷ್ಟ ಆಗಿದೆ. ಕೂಡಲೇ ಬರಪರಿಹಾರವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಡಾ. ಶೇಖರ್ ಪೂಜಾರಿ ಮಾತನಾಡಿ ‘‘ಮಂಗಳೂರಿನಲ್ಲಿ ನೋಟಾ ಭೀತಿ, ಬಿಜೆಪಿ ಅಭ್ಯರ್ಥಿ ಸೋಲುತ್ತಾರೆಂಬ ಹೆದರಿಕೆಯಿಂದ ನಾರಾಯಣ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಿಲ್ಲವರ ಭಾವನಾತ್ಮಕ ವಿಚಾರವನ್ನು ಕೆದಕಿ ರಾಜಕೀಯ ಲಾಭ ಪಡೆಯುವ ಯತ್ನ ನಡೆಸಲು ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅಂದು ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ನಿರಾಕರಿಸಿದ ನೀವು ಇಂದು ಯಾವ ಪುರುಷಾರ್ಥಕ್ಕಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಐದು ಬ್ಯಾಂಕುಗಳನ್ನು ವಿಲೀನ ಮಾಡಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಾಳು ಮಾಡಲಾಯಿತು. ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನವನ್ನು ಅದಾನಿಗೆ ನೀಡಲಾಯಿತು. ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಬಿಲ್ಲವ ಸಮಾಜದ ಹಲವು ಮಂದಿ ಯುವಕರ ಪ್ರಾಣ ಕಳೆದುಕೊಳ್ಳುವಂತೆ ಮಾಡಿದರು. ಈಗ ಬಿಲ್ಲವ ಸಮುದಾಯದವರಿಗೆ ತಪ್ಪಿನ ಅರಿವಾಗಿದೆ. ಮಂಗಳೂರು ಏರ್ ಪೋರ್ಟ್‌ಗೆ ಕೋಟಿ-ಚೆನ್ನಯರ ಹೆಸರಿಡುವಂತೆ ಕೇಳಿದರೂ ಅದನ್ನು ಕೇಂದ್ರ ಸರಕಾರ ನಿರಾಕರಿಸಿದರು ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ ಪೂಜಾರಿ ಒಂದು ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯ ಗಳಿಸುತ್ತಾರೆ ಎಂಬ ಭಯ ಬಿಜೆಪಿಗೆ ಕಾಡುತ್ತಿದೆ. ಹೀಗಾಗಿ ಮತ್ತೆ ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಚುನಾವಣೆಯಲ್ಲಿ ಲಾಭ ಪಡೆಯಲು ಮುಂದಾಗಿದೆ. ಅವರ ಪ್ರಯತ್ನ ಈ ಬಾರಿ ನಡೆಯುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ ಭಂಡಾರಿ, ಮಾಜಿ ಮೇಯರ್ ಕೆ.ಅಶ್ರಫ್, ಕಾಂಗ್ರೆಸ್ ಧುರೀಣರಾದ ಅಶ್ರಫ್ ಬಜಾಲ್, ಮಲಾರ್ ಮೋನು, ನೀರಜ್ ಚಂದ್ರಪಾಲ್, ಜೋಕಿಂ ಡಿ’ ಸೋಜ, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಅಲಿಸ್ಟರ್ ಡಿಕುನ್ಹ, ಸಬಿತಾ ಮಿಸ್ಕಿತ್, ರಮಾನಂದ ಪೂಜಾರಿ, ಕವಿತಾ ವಾಸು, ಶಾಂತಲ ಗಟ್ಟಿ, ಝಕರಿಯಾ ಮಲಾರ್, ಡಿ.ಎಂ.ಮುಸ್ತಫ, ಇಮ್ರಾನ್ ಎ.ಆರ್., ಸಲೀಂ ಪಾಂಡೇಶ್ವರ, ಜಯರಾಜ್ ಕೋಟ್ಯಾನ್, ಆಶೀಫ್ ಬೆಂಗ್ರೆ, ಅನ್ಸಾರ್ ಸಾಲ್ಮರ, ಸವಾದ್ ಸುಳ್ಯ, ಸೌಹಾನ್ ಎಸ್.ಕೆ, ಸುಹಾನ್ ಆಳ್ವ ಮತ್ತಿತರರಿದ್ದರು.