ದೇಶದ ಯಾವ ಭಾಗದಲ್ಲೂ ಮೋದಿ ಅಲೆಯಿಲ್ಲ: ಗ್ಯಾರಂಟಿಗಳ ಬಲದಲ್ಲೇ ಕಾಂಗ್ರೆಸ್ ಗೆಲುವು- ಸೊರಕೆ

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಭರವಸೆಗಳು ಮತ್ತು ಚುನಾವಣಾ ಪ್ರಣಾಳಿಕೆಯಲ್ಲಿನ ಐದು ‘ನ್ಯಾಯ’ ಗಳ ಅಡಿಯಲ್ಲಿ ನೀಡಿದ 25 ಭರವಸೆಗಳ ಮೇಲೆ ಪಕ್ಷದ ಪ್ರಚಾರ ಕೇಂದ್ರೀಕೃತವಾಗಿರುತ್ತದೆ ಎಂದು ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ ಕುಮಾರ್‌ ಸೊರಕೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಯಾವ ಭಾಗದಲ್ಲೂ ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲ. ಕಾಂಗ್ರೆಸ್‌ ಪಕ್ಷವು ಗ್ಯಾರಂಟಿಗಳ ಬಲದಲ್ಲೇ ಗೆಲುವು ಸಾಧಿಸಲಿದೆ ಅಭಿವೃದ್ಧಿಯನ್ನೇ ಮುಂದಿಟ್ಟು ಕೊಂಡು ಕಾಂಗ್ರೆಸ್‌ ಪಕ್ಷವು ಚುನಾವಣೆ ಎದುರಿಸಲಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಾಡಿನ ಜನರ ಹಿತ ರಕ್ಷಿಸುತ್ತಿವೆ. ಅದಕ್ಕೆ ಪ್ರತಿಯಾಗಿ ಜನರು ಕಾಂಗ್ರೆಸ್‌ ಪಕ್ಷದ ಕೈ ಹಿಡಿಯಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸಿದ್ದ ವಿರೋಧ ಪಕ್ಷದವರು ಈಗ ಗ್ಯಾರಂಟಿಗಳ ಮೊರೆ ಹೋಗಿದ್ದಾರೆ. ಬಿಜೆಪಿಯವರ ಬಳಿ ಮತದಾರರಿಗೆ ತಿಳಿಸಲು ಯಾವ ಯೋಜನೆಗಳೂ ಇಲ್ಲ. ಗ್ಯಾರಂಟಿ ಯೋಜನೆಗಳು ಸುಳ್ಳು ಎನ್ನುತ್ತಿರುವ ಬಿಜೆಪಿಗೆ ಜನರು ಈ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು. ಬಿಜೆಪಿ ನಡೆಸುತ್ತಿರುವ ಮಹಿಳಾ ಸಮಾವೇಶಗಳಲ್ಲಿ ಅಭಿ‍ಪ್ರಾಯ ಸಂಗ್ರಹಿಸಲಿ. ರಾಜ್ಯದ ಮಹಿಳೆಯರೆಲ್ಲರೂ ಗ್ಯಾರಂಟಿ ಯೋಜನೆಗಳ ಲಾಭ ಪಡೆದಿರುವುದು ಗೊತ್ತಾಗುತ್ತದೆ ಎಂದರು.

ಮನೆ ಮನೆಗೂ ಗ್ಯಾರಂಟಿ ಯೋಜನೆಗಳ ಮಾಹಿತಿಯುಳ್ಳ ಕಾರ್ಡ್‌ಗಳನ್ನು ವಿತರಿಸಲಾಗುವುದು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ, ಮಹಾಲಕ್ಷ್ಮಿ ಯೋಜನೆ, ಸರ್ಕಾರಿ ಹುದ್ದೆಗಳ ಭರ್ತಿ ಸೇರಿದಂತೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನ ಭರವಸೆಗಳನ್ನೂ ಪ್ರತಿ ಮನೆಗೆ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸೊರಕೆ ಹೇಳಿದರು.

‘ಗೃಹ ಲಕ್ಷ್ಮಿ’ ಗ್ಯಾರಂಟಿ ತನ್ನ ಕುಟುಂಬಕ್ಕೆ ಸಹಾಯ ಮಾಡಿದೆ ಎಂದು ದ್ವಿತೀಯ ಪಿಯುಸಿ ರ್ಯಾಂಕ್ ಪಡೆದ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ ಮತ್ತು ಮಹಿಳೆಯೊಬ್ಬರು ಹಣವನ್ನು ಉಳಿಸಿ ಫ್ರಿಡ್ಜ್ ಖರೀದಿಸಿದ್ದಾರೆ ಎಂದು ಸೊರಕೆ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ.

ಮಹಿಳೆಯರು ಉತ್ತಮ ಜೀವನ ನಡೆಸಲು ಸಮರ್ಥರಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಕೊಡುಗೆ ಎಷ್ಟು? ಖಾತ್ರಿಗಳ ಬಗ್ಗೆ ಬಿಜೆಪಿಯವರು ಸುಳ್ಳು ಹೇಳಿದರೆ ಫಲಾನುಭವಿಗಳು ತಕ್ಕ ಪಾಠ ಕಲಿಸುತ್ತಾರೆ ಎಂದರು. ದೇಶದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ರಾಜ್ಯದಲ್ಲಿ ಪಕ್ಷ 20 ಸ್ಥಾನ ಗೆಲ್ಲಲಿದೆ ಎಂದರು. ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಸಹ ಅಧ್ಯಕ್ಷ ಎಲ್‌. ಹನುಮಂತಯ್ಯ ಮಾತನಾಡಿ, ‘ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹೆದರಿದೆ. ಈ ಕಾರಣದಿಂದ ಗ್ಯಾರಂಟಿ ಯೋಜನೆ ಕುರಿತ ಮಾಹಿತಿಯುಳ್ಳ ಪತ್ರಗಳನ್ನು ವಿತರಿಸದಂತೆ ತಡೆಯಲು ಪ್ರಯತ್ನಿಸುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!