ವೈಯಕ್ತಿಕ ಪ್ರಯಾಣ ಬೇಡ- ಅಮೆರಿಕ ಸಿಬಂದಿಗಳಿಗೆ ಸೂಚನೆ
ವಾಷಿಂಗ್ಟನ್: ಇಸ್ರೇಲ್‍ನ ಗ್ರೇಟರ್ ಟೆಲ್‍ಅವೀವ್, ಜೆರುಸಲೇಮ್ ಮತ್ತು ಬಿವರ್ ಶೆವಾ ನಗರಗಳ ಹೊರಗೆ ಪ್ರಯಾಣಿಸದಂತೆ ಇಸ್ರೇಲ್‍ನಲ್ಲಿರುವ ತನ್ನ ಸಿಬಂದಿಗಳು ಹಾಗೂ ಅವರ ಕುಟುಂಬದವರಿಗೆ ಅಮೆರಿಕ ಸೂಚಿಸಿದೆ. ಇಸ್ರೇಲ್ ವಿರುದ್ಧ ಪ್ರತೀಕಾರ ದಾಳಿ ನಡೆಸುವ ಇರಾನ್ ಬೆದರಿಕೆ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮುನ್ನೆಚ್ಚರಿಕೆಯ ಕಾರಣದಿಂದ ಅಮೆರಿಕ ಸರ್ಕಾರಿ ನೌಕರರು, ಅವರ ಕುಟುಂಬದ ಸದಸ್ಯರನ್ನು ನಗರದ ಹೊರಗಿನ ಪ್ರದೇಶಕ್ಕೆ ವೈಯಕ್ತಿಕ ಪ್ರವಾಸದಿಂದ ಮುಂದಿನ ಸೂಚನೆಯವರೆಗೆ ನಿರ್ಬಂಧಿಸಲಾಗಿದೆ ಎಂದು ಇಸ್ರೇಲ್‍ನ ಅಮೆರಿಕ ದೂತಾವಾಸ ಹೇಳಿದೆ.
ಇಂತಹ ಎಚ್ಚರಿಕೆಗಳ ಮೂಲಕ ಅಮೆರಿಕದ ಪ್ರಜೆಗಳಿಗೆ ಭದ್ರತಾ ಕ್ರಮಗಳನ್ನು ನವೀಕರಿಸುವ ನೀತಿಯನ್ನು ಅಮೆರಿಕ ಹೊಂದಿದೆ. ದಾಳಿಯ ಬಗ್ಗೆ ಇರಾನ್ ಸಾರ್ವಜನಿಕವಾಗಿ ಬೆದರಿಕೆ ಒಡ್ಡುತ್ತಿದೆ. ಮಧ್ಯಪ್ರಾಚ್ಯ ಮತ್ತು ಇಸ್ರೇಲ್‍ನಲ್ಲಿ ಅಪಾಯದ ಪರಿಸ್ಥಿತಿಯ ಮೇಲೆ ನಾವು ನಿಗಾ ವಹಿಸಿದ್ದೇವೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.