ಮೂಡುಬಿದರೆ: ಶಿಕ್ಷಣದಂತೆ ಅಭಿವೃದ್ಧಿಯಲ್ಲೂ ಜಿಲ್ಲೆ ಕ್ರಾಂತಿ ಕಾಣಬೇಕಾಗಿದೆ-ಪದ್ಮರಾಜ್ ಆರ್
ಮೂಡುಬಿದರೆ: ಶಿಕ್ಷಣ ಕ್ರಾಂತಿ ಆಗಿರುವ ದಕ್ಷಿಣ ಕನ್ನಡ ಜಿಲ್ಲೆ, ಅಭಿವೃದ್ಧಿ ಕ್ರಾಂತಿಯನ್ನು ಎದುರು ನೋಡುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಬೆಳುವಾಯಿ ಕಮಲಮ್ಮ ಸಭಾಂಗಣದಲ್ಲಿ ನಡೆದ ಮೂಡುಬಿದರೆ ವಿಧಾನಸಭಾ ಕ್ಷೇತ್ರದ ಶಿರ್ತಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬೂತ್ ಅಧ್ಯಕ್ಷರು ಹಾಗೂ ಸಕ್ರಿಯ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ತುಳುನಾಡ ಸಂಸ್ಕೃತಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಜಿಲ್ಲೆ ಪ್ರಾಕೃತಿಕವಾಗಿಯೂ ಸಂಪದ್ಭರಿತ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಜಿಲ್ಲೆ. ಆದರೆ ಜಿಲ್ಲೆಯಲ್ಲಿ ಕಳೆದ ಮೂವತ್ತಮೂರು ವರ್ಷದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದರು.
ತಾನು ಸಾಮಾಜಿಕ, ಧಾರ್ಮಿಕ ರಂಗದಲ್ಲಿದ್ದವನು. ಬಡ ಕುಟುಂಬದಿಂದ ಬಂದವನು. ತಂದೆ – ತಾಯಿ ನೀಡಿರುವ ವಿದ್ಯೆಯಿಂದ ನಾನು ಇಷ್ಟು ಮುಂದೆ ಬರಲು ಸಾಧ್ಯವಾಯ್ತು. ಇಂದು ಕಾಂಗ್ರೆಸ್ ತನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಇದು ಸಮಸ್ತ ಹಿಂದುಳಿದ ವರ್ಗದವರಿಗೆ ಸಿಕ್ಕಿರುವ ಅವಕಾಶ ಎಂದರು.
ಇದೇ ಸಂದರ್ಭ ಪ್ರವೀಣ್ ಮಸ್ಕರೇನ್ಹಸ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಅಭಯಚಂದ್ರ ಜೈನ್, ಹೊಸಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಹಾಸ್ ಸನಿಲ್, ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರವೀಣ್ ಶಿರ್ತಾಡಿ ಮೊದಲಾದವರು ಉಪಸ್ಥಿತರಿದ್ದರು.