ರಂಗಭೂಮಿ ಮಾನವೀಯತೆಯನ್ನು ಬೆಳೆಸುವ ಮುಖ್ಯ ಮಾಧ್ಯಮ: ಡಾ. ಪ್ರಸಾದ್ ರಾವ್ ಎಂ
ಉಡುಪಿ: ಯುವ ಮನಸ್ಸುಗಳಿಗೆ ರಂಗಶಿಬಿರವು ಸಂತಸ ಹಾಗೂ ಪ್ರೇರಣೆಯನ್ನು ನೀಡುತ್ತದೆ.
ಶಿಕ್ಷಣದ ಜೊತೆಗೆ ರಂಗಶಿಕ್ಷಣವು ಅತ್ಯಂತ ಅಗತ್ಯವಾಗಿದ್ದು ಇದು ಜೀವನ ಶಿಕ್ಷಣದ ಮೌಲ್ಯವನ್ನು ಪ್ರತಿಪಾದಿಸುತ್ತದೆ. ನಾಟಕದ ಕಥೆಗಳಲ್ಲಿ ಬರುವ ವಿವಿಧ ಪಾತ್ರಗಳು ಸುಖ ದುಃಖಗಳನ್ನು ತಿಳಿಯುವ, ತಿಳಿಸುವ ಅದಕ್ಕೆ ಸ್ಪಂದಿಸುವ ವಿಶೇಷ ಅನುಭವವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ರಂಗಭೂಮಿಯು ಮಾನವೀಯತೆಯನ್ನು ಬೆಳೆಸುವ, ಮನುಷ್ಯ ಮನುಷ್ಯರಾಗಿ ಬದುಕಲು ಕಲಿಸುವ ಮುಖ್ಯ ಮಾಧ್ಯಮವೆಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇದರ ಸಹಪ್ರಾಧ್ಯಾಪಕ ಡಾ. ಪ್ರಸಾದ್ ರಾವ್ ಎಂ ಅಭಿಪ್ರಾಯಪಟ್ಟರು.
ಅವರು ಸುಮನಸಾ ಕೊಡವೂರು ಉಡುಪಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ದೊಂದಿಗೆ ಹಮ್ಮಿಕೊಂಡ ಮಕ್ಕಳ ರಂಗಶಿಬಿರ ತಂದಾನಿ ತಾನವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಮತ್ತು ರಂಗತಂಡವಾಗಿ ಸಂಘಟನಾತ್ಮಕವಾಗಿ ಬೆಳೆಯುತ್ತಿರುವ ಸುಮನಸಾದ ಯಶಸ್ಸಿಗೆ ಇಂತಹ ಶಿಬಿರಗಳು ಪೂರಕ ಮತ್ತು ಮಾದರಿ ಎಂದರು.
ಸಂದರ್ಭದಲ್ಲಿ ಶಿಬಿರದ ನಿರ್ದೇಶಕ ಮಾನಿಷ್ ಪಿಂಟೋ, ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಗೌರವಾಧ್ಯಕ್ಷ ಎಂ ಎಸ್ ಭಟ್ ಮತ್ತು ಸಂಚಾಲಕ ಭಾಸ್ಕರ್ ಪಾಲನ್ ಉಪಸ್ಥಿತರಿದ್ದರು. ದಯಾನಂದ ಯು. ಕಾರ್ಯಕ್ರಮ ನಿರೂಪಿಸಿದರು.