ಮಂಗಳೂರು: ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ: ಫ್ಯಾಕ್ಟರಿಗೆ ಬೀಗ ಜಡಿದ ಅಧಿಕಾರಿಗಳು

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಏಳನೀರು ಫ್ಯಾಕ್ಟರಿಯ ಎಳನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ.

ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಎ.8 ರಂದು ಎಳನೀರು ಖರೀದಿಸಿ ಮನೆಗೆ ಕೊಂಡು ಹೋಗಿದ್ದರು ಎನ್ನಲಾಗಿದೆ. ಎಳನೀರು ಸೇವಿಸಿದ 137 ಮಂದಿ ಮರುದಿನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಅಸ್ವಸ್ಥಗೊಂಡವರು ಫಾದರ್ ಮುಲ್ಲರ್ ಆಸ್ಪತ್ರೆ, ಬಿ.ಸಿ.ರೋಡ್ ಪರ್ಲಿಯ ಆಸ್ಪತ್ರೆ, ಬಂಟ್ವಾಳ ತಾಲೂಕು ಆಸ್ಪತ್ರೆ, ಕಲ್ಲಡ್ಕದ ಪುಷ್ಪರಾಜ್ ಆಸ್ಪತ್ರೆ, ಮಂಗಳೂರು ನಗರದ ಹೈಲ್ಯಾಂಡ್, ಯುನಿಟಿ, ಕಣಚೂರು, ಯೆನೆಪೋಯ, ಇಂಡಿಯಾನ, ಕೊಲಾಸೊ ಹಾಗೂ ಇತರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು.

ಎಳನೀರು ಕುಡಿದು ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವವರನ್ನು ಆರೋಗ್ಯ ಅಧಿಕಾರಿಗಳ ತಂಡ ಭೇಟಿಯಾಗಿ ಅವರಿಂದ ಮಾಹಿತಿ ಪಡೆದಿದೆ.

ಒಟ್ಟು 137 ಮಂದಿ ಎಳನೀರು ಕುಡಿದಿರುವುದರಿಂದ ಅಸ್ವಸ್ಥರಾಗಿದ್ದು, ಹೊರರೋಗಿಗಳಾಗಿ 84, ಒಳರೋಗಿಗಳಾಗಿ 53 ಮಂದಿ ದಾಖಲಾಗಿದ್ದರು. ಈ ಪೈಕಿ ಇದುವರೆಗೆ 23 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿರುವ ಎಲ್ಲರ ಆರೋಗ್ಯವು ಸ್ಥಿರವಾಗಿದೆ. ಆರೋಗ್ಯ ಇಲಾಖೆಯಿಂದ ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಳನೀರು ಫ್ಯಾಕ್ಟರಿ ಬಂದ್: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾ ಅಂಕಿತ ಅಧಿಕಾರಿ ಆಹಾರ ಸುರಕ್ಷತೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಅವರನ್ನು ಒಳಗೊಂಡ ತಂಡ ಗುರುವಾರ ಅಡ್ಯಾರ್‌ನ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಮತ್ತು ಮತ್ತು ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ತಿಳುವಳಿಕೆ ನೋಟೀಸ್ ನೀಡಿ ಬಂದ್ ಮಾಡಿಸಿದ್ದಾರೆ.

ಬೊಂಡ ನೀರಿಗೆ ಭಾರಿ ಬೇಡಿಕೆ: ಅಡ್ಯಾರ್‌ನಲ್ಲಿ ಐಸ್‌ಕ್ರೀಮ್ ಹಾಗೂ ಇತರ ಉತ್ಪನ್ನಗಳನ್ನು ತಯಾರಿಸುವ ಎಳನೀರು ಫ್ಯಾಕ್ಟರಿಯಲ್ಲಿ ಎಳನೀರು ಮಾರಲಾಗುತ್ತಿದ್ದು, ಉಪವಾಸದ ಸಮಯದಲ್ಲಿ ಬೇಡಿಕೆ ಜಾಸ್ತಿ ಇರುತ್ತಿತ್ತು. ಸಾಯಂಕಾಲದ ಹೊತ್ತಿಗೆ ಎಳನೀರಿಗಾಗಿ ಮುಗಿ ಬೀಳುತ್ತಿದ್ದ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು.

ಬುಧವಾರ ಸಾಮಾಜಿಕ ಜಾಲಾ ತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ನೀಡಿದ ನಿರ್ದೆಶನದಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಆಹಾರ ಭದ್ರತಾ ಅಧಿಕಾರಿ ಭೇಟಿ ನೀಡಿ ಮಾಹಿತಿ ಪಡೆದು, ಎಳನೀರಿನ ಸ್ಯಾಂಪಲ್ ಸಂಗ್ರಹಿಸಿದ್ದರು. 15 ಲೀಟರ್ ಎಳನೀರನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!