ಗೋಪಾಲ ಪೂಜಾರಿ ಸಜ್ಜನ ಮತ್ತು ಪ್ರಾಮಾಣಿಕ ಎಂದಿದ್ದೆ, ಸುಳ್ಳಾದರೆ ಕ್ಷಮಿಸಿ: ಕೋಟ ತಿರುಗೇಟು

ಉಡುಪಿ: ಮಾಜಿ ಶಾಸಕ ಗೋಪಾಲ ಪೂಜಾರಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು ನನ್ನ ಬಗ್ಗೆಯೂ ಕೋಟ ಸುಳ್ಳು ಹೇಳಿದ್ದಾರೆ ಎಂದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಗೋಪಾಲ ಪೂಜಾರಿಯವರನ್ನು ಸಜ್ಜನ ಮತ್ತು ಪ್ರಾಮಾಣಿಕ ಎಂದು ನಾನು ಹೇಳಿದ್ದೆ. ಈ ಮಾತು ಸುಳ್ಳಾದರೆ ಕ್ಷಮಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೋಪಾಲ ಪೂಜಾರಿ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

ಕುಚ್ಚಲಕ್ಕಿಗೆ ಅವಿರತ ಪ್ರಯತ್ನ :
ವಾಸ್ತವಿಕವಾಗಿ ಕುಚ್ಚಲಕ್ಕಿ ಕೊಡುವ ಪ್ರಕ್ರಿಯೆ ಬರೇ ಒಂದೆರಡು ತಿಂಗಳಲ್ಲಿ ಮುಗಿಯುವ ಕೆಲಸವಲ್ಲ. ದ.ಕ. ಮತ್ತು ಉಡುಪಿ ಜಿಲ್ಲೆಗೆ ಸುಮಾರು 12 ಲಕ್ಷ ಕ್ವಿಂಟಾಲ್ ಕುಚ್ಚಿಗೆ ಅಕ್ಕಿಯ ಅವಶ್ಯಕತೆ ಇದ್ದು, 16 ಲಕ್ಷ ಕ್ವಿಂಟಾಲ್ ಕೆಂಪು ಅಕ್ಕಿ ನೀಡುವ ಭತ್ತದ ತಳಿಗಳನ್ನು ಖರೀದಿಸ ಬೇಕು. ಇದುವರೆಗೆ ಅಭಿಲಾಶ್, ಜಯ, ಎಂಒ4 ಮುಂತಾದ ತಳಿಗಳಿಗೆ ಬೆಂಬಲ ಬೆಲೆಯ ಮಾತೇ ಇರಲಿಲ್ಲ. ನನ್ನ ನಿರಂತರ ಪ್ರಯತ್ನದಿಂದ ಕೇಂದ್ರ ಸರಕಾರದ ಅನುಮತಿ ಪಡೆದು ಬೆಂಬಲ ಬೆಲೆಯನ್ನು ನೀಡಿ ಖರೀದಿಸುವ ಬಗ್ಗೆ ಸರಕಾರ ನಿರ್ಧಾರ ಮಾಡಿತ್ತು. ಬೆಂಬಲ ಬೆಲೆ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ ರೂ.500ನ್ನು ಹೆಚ್ಚುವರಿಯಾಗಿ ರಾಜ್ಯ ಸರಕಾರ ಭರಿಸುವುದಾಗಿ ನಿರ್ದೇಶನ ನೀಡಿದ್ದರು.

ಈ ಪ್ರಕ್ರಿಯೆಗಳು ನಡೆಯುತ್ತಿರುವಾಗಲೇ ನಮ್ಮ ಸರಕಾರದ ಅವಧಿಯ ಕೊನೆಯ ದಿನಗಳು ಬಂದಿತ್ತು. ಮುಂದಿನ ವರ್ಷ, ಅಂದರೆ ಪ್ರಸಕ್ತ ಸಾಲಿನಲ್ಲಿ ಖರೀದಿಗೆ ಎಲ್ಲ ಅನುಕೂಲಗಳೂ ಇತ್ತು. ದುರಾದೃಷ್ಟವಶಾತ್ ನಮ್ಮ ಸರಕಾರ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಆ ಬತ್ತ ಖರೀದಿಯ ಪ್ರಕ್ರಿಯೆಗಳು ಮುಂದೂಡಲ್ಪಟ್ಟಿತು. ಇದು ಕುಚ್ಚಲಕ್ಕಿ ನೀಡಲು ಉದ್ಭವಿಸಿದ ತಡೆಯಾಗಿತ್ತು. ಈ ಎಲ್ಲ ವಿಚಾರಗಳು ಗೋಪಾಲ ಪೂಜಾರಿಯವರಿಗೆ ಗೊತ್ತಿತ್ತು. ಚುನಾವಣಾ ಪ್ರಚಾರದಲ್ಲಿ ನಾನೆಲ್ಲೂ ಕೂಡಾ ಕುಚ್ಚಲಕ್ಕಿಯ ಬಗ್ಗೆ ಉಲ್ಲೇಖ ಮಾಡದಿದ್ದರೂ, ಗೋಪಾಲ ಪೂಜಾರಿ ಅವರು ಸರಕಾರ ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಕುಚ್ಚಲಕ್ಕಿ ನೀಡುವುದಾಗಿ ಹೇಳಿರುವುದನ್ನು ಮರೆಯಲಾಗದು.

ಗೋಪಾಲ ಪೂಜಾರಿಯವರು ರಾಜಕಾರಣದ ಮಿತಿ ಮೀರಿ ಮಾತನಾಡುತ್ತಿದ್ದು ಇದು ಆರೋಗ್ಯಕರ ರಾಜಕಾರಣಕ್ಕೆ ಯೋಗ್ಯವಾದಂತಹ ಮಾತುಗಳಲ್ಲ. ಅಷ್ಟಾಗಿಯೂ ಕೂಡ ಗೋಪಾಲ ಪೂಜಾರಿಯವರು ಸಜ್ಜನ, ಪ್ರಾಮಾಣಿಕರು ಎಂದು ನನ್ನ ಬಳಿ ಬಂದಿರುವ ಅನೇಕ ಮಂದಿಯಲ್ಲಿ ಹೇಳುತ್ತಿದ್ದೆ. ನಾನು ಸುಳ್ಳು ಹೇಳುತ್ತಿದ್ದೇನೆ ಎಂದಾಗ ಬೇಕಾದರೆ ಅವರು ಸಜ್ಜನ, ಪ್ರಾಮಾಣಿಕರು ಅಲ್ಲ ಎಂಬುದನ್ನು ಅವರೇ ಒಪ್ಪಿಕೊಂಡಂತಾಗುತ್ತದೆ. ನಿಮ್ಮ ಬಗ್ಗೆ ಗೌರವದ ಮಾತುಗಳು ಸುಳ್ಳಾದರೆ ಹಾಗೆ ಹೇಳಿದ್ದಕ್ಕಾಗಿ ಕ್ಷಮಿಸಿ ಎಂದು ಎಂದು ಕೋಟ ತಿರುಗೇಟು ನೀಡಿದ್ದಾರೆ.

ಪ.ಜಾ. ಮತ್ತು ಪ.ಪಂ.ಗಳ ಅಭಿವೃದ್ಧಿಗೆ ಕ್ರಮ :
ಗೋಪಾಲ ಪೂಜಾರಿಯವರು ಪ.ಜಾ. ಮತ್ತು ಪ.ಪಂ. ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ ಎಂದಿರುವುದನ್ನು ಗಮನಿಸಿದ್ದೇನೆ. ವಾಸ್ತವಿಕವಾಗಿ ಅವರಿಗೆ ಏನೇನೂ ಗೊತ್ತಿಲ್ಲ. ನನ್ನ ಅವಧಿಯಲ್ಲಿ 97% ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಟ್ಟಿರುವುದೇ ಒಂದು ದಾಖಲೆ ಮತ್ತು ಪ.ಜಾ. ಮತ್ತು ಪ.ಪಂ. ದವರ ಎಲ್ಲಾ ಮಕ್ಕಳಿಗೂ ಮುಕ್ತವಾಗಿ ಹಾಸ್ಟೆಲಿಗೆ ಸೇರಿಸಿಕೊಳ್ಳ ಬೇಕು ಎನ್ನುವ ಆದೇಶವನ್ನು ಕೊಟ್ಟಿದ್ದೆ ಮತ್ತು ಅನುಷ್ಠಾನವನ್ನೂ ಮಾಡಿದ್ದೇನೆ. ರಾಜ್ಯಾದ್ಯಂತ ಎಲ್ಲ ದಲಿತ ಮುಖಂಡರು ಕೂಡ ನಮ್ಮ ಇಲಾಖೆ ಅತ್ಯಂತ ಪಾರದರ್ಶಕವಾಗಿ ನಡೆದ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ ಎನ್ನುವುದು ಗೋಪಾಲ ಪೂಜಾರಿಯವರಿಗೆ ಹೇಳಿದರೂ ಅರ್ಥವಾಗುವುದಿಲ್ಲ ಎಂದು ಕೋಟ ತಿಳಿಸಿದ್ದಾರೆ.

ಹಿಂ.ವರ್ಗ ಗಳ ಅಭಿವೃದ್ಧಿಗೆ ಕ್ರಮ :
ಹಿಂದುಳಿದ ವರ್ಗದ ಇಲಾಖೆಯಲ್ಲಿ ನಾನು ಮಂತ್ರಿಯಾಗುವವರೆಗೆ ಮಕ್ಕಳಿಗೆ ಹಾಸ್ಟೆಲ್ ಗಳ ಕೊರತೆ ಇತ್ತು. 26,000 ಮಕ್ಕಳನ್ನು ಹಾಸ್ಟೆಲ್ ಗೆ ಒಂದೇ ದಿವಸ ಸೇರಿಸುವಂತಹ ಆದೇಶವನ್ನು ಮಾಡಿ ಅನುಷ್ಠಾನ ಮಾಡಿದ್ದೆ. ಇಂದು ಹಾಸ್ಟೆಲ್ ಇಲ್ಲದೆ ಮಕ್ಕಳು ಪರದಾಡುತ್ತಿರುವುದು ಗೋಪಾಲ್ ಪೂಜಾರಿ ಅವರಿಗೆ ಯಾಕೆ ಅರ್ಥವಾಗುತ್ತಿಲ್ಲವೋ ನನಗೆ ತಿಳಿದಿಲ್ಲ.

ಕೋಟಿ ಚೆನ್ನಯರ ಹೆಸರಲ್ಲಿ ಹಿಂದುಳಿದ ವರ್ಗದ ಮಕ್ಕಳಿಗೆ ಸೇನಾಪೂರ್ವ ತರಬೇತಿ ಸಂಸ್ಥೆಯನ್ನು ಮಾಡಿದ್ದೆ. ಗೋಪಾಲ ಪೂಜಾರಿಯವರು ಒಮ್ಮೆ ನೋಡಿಕೊಂಡು ಬರಬೇಕು. ಪರೀಕ್ಷೆಗೆ ಹಾಜರಾದ 40 ಮಂದಿ ಮಕ್ಕಳಲ್ಲಿ 36 ಮಂದಿ ಮಕ್ಕಳು ಪಾಸಾಗಿದ್ದಾರೆ. ಇದೆಲ್ಲವೂ ಗೋಪಾಲ ಪೂಜಾರಿಯವರಿಗೆ ಅರ್ಥವಾಗುತ್ತದೆ ಎಂದು ನನಗನಿಸುತ್ತಿಲ್ಲ ಎಂದು ಕೋಟ ವ್ಯಂಗ್ಯ ಮಾಡಿದ್ದಾರೆ.

ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪನೆ ಮಾಡಿದ್ದು ನಾನು ಎನ್ನುವುದಾಗಲಿ ಮತ್ತು ನಾರಾಯಣ ಗುರುಗಳ ಹೆಸರಿನಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಯನ್ನು ಆರಂಭಿಸಿ ಬಡವರ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದು ನಾನು ಎನ್ನುವ ವಿಚಾರದಲ್ಲಾಗಲಿ ಗೋಪಾಲ ಪೂಜಾರಿಯವರಿಗೆ ಜಾಣ ಮರೆವು ಬರುತ್ತದೆ ಎಂದ ಕೋಟ. ಒಟ್ಟಾರೆ ರಾಜಕಾರಣದ ಕೆಸರಾಟದಲ್ಲಿ ಗೋಪಾಲ ಪೂಜಾರಿಯವರಂತವರು ವಿನಾಕಾರಣ ಗೊಂದಲ ಮಾತಾಡುತ್ತಿರುವುದನ್ನು ಜನತೆ ಅರ್ಥಮಾಡಿಕೊಳ್ಳಬೇಕು ಎನ್ನುವುದು ನನ್ನ ವಿನಂತಿ ಎಂದು ಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!