ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಸುವರ್ಣ ಪೀಠಾರೋಹಣ: ಸುವರ್ಣ ಸಂಕಲ್ಪ

ಉಡುಪಿ: 1974 ಏಪ್ರಿಲ್ 8 ರಂದು ತಮ್ಮ 12ನೇ ವಯಸ್ಸಿನಲ್ಲಿ ಸಂನ್ಯಾಸವನ್ನು ಸ್ವೀಕರಿಸಿ ಪೀಠಾಧಿಪತಿಗಳಾದ, ಪ್ರಸ್ತುತ ಶ್ರೀ ಕೃಷ್ಣಮಠದ ಪರ್ಯಾಯ ಸ್ವಾಮಿಗಳಾದ ಶ್ರೀಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳ ಸಂನ್ಯಾಸ ಜೀವನಕ್ಕೆ ಏಪ್ರಿಲ್ 2024 ಕ್ಕೆ 50 ವಸಂತಗಳ ಸುವರ್ಣ ಸಂಭ್ರಮ.

ಈ ವಿಶೇಷ ಸಂದರ್ಭವನ್ನು ಪರಮಪೂಜ್ಯ ಶ್ರೀಶ್ರೀಗಳ ಶಿಷ್ಯ ಹಾಗೂ ಅಭಿಮಾನಿವೃಂದವು ಏಪ್ರಿಲ್ 14 ರ ಸೌರಮಾನ ಯುಗಾದಿಯ ಶುಭಸಂದರ್ಭದಲ್ಲಿ ವಿಶೇಷವಾದ ಕಾರ್ಯಕ್ರಮಗಳ ಮೂಲಕವಾಗಿ ಗೌರವಾರ್ಪಣೆ ಮಾಡಲು ನಿಶ್ಚಯಿಸಿದ್ದು, ಸಾಯಂ ಗಂಟೆ 5 ಕ್ಕೆ ಮೆರವಣಿಗೆಯಲ್ಲಿ ಪರಮಪೂಜ್ಯ ಸ್ವಾಮಿಗಳನ್ನು ರಾಜಾಂಗಣಕ್ಕೆ ಕರೆತಂದು ಭಕ್ತರು-ಶಿಷ್ಯರು ಮತ್ತು ವಿವಿಧ ಸಂಘಟನೆಗಳಿಂದ ಪೂಜ್ಯ ಶ್ರೀಗಳ ಮೂಲಕ ಶ್ರೀ ಕೃಷ್ಣನಿಗೆ ಸುವರ್ಣ ನಾಣ್ಯಗಳಿಂದ ಅಭಿಷೇಕ ಮತ್ತು ಸಂಜೆ 4ಗಂಟೆ ಯಿಂದ 7 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ತಮ್ಮ ಸುವರ್ಣ ಸಂನ್ಯಾಸದ ಈ ವಿಶೇಷ ಸಂದರ್ಭವನ್ನು ಸ್ಮರಣೀಯವನ್ನಾಗಿಸಲು ಹಾಗೂ ತಮ್ಮ ಚತುರ್ಥ ಪರ್ಯಾಯವಾದ ‘ವಿಶ್ವಗೀತಾ ಪರ್ಯಾಯ’ದ ವಿಶ್ವವ್ಯಾಪಿ ಯೋಜನೆ “ಕೋಟಿಗೀತಾ ಲೇಖನ ಯಜ್ಞ”ದ ಸ್ಮರಣಾರ್ಥವಾಗಿ ಪೂಜ್ಯ ಶ್ರೀಗಳು ಉಡುಪಿ ಶ್ರೀ ಕೃಷ್ಣನಿಗೆ ಅಪೂರ್ವವಾದ “ಪಾರ್ಥಸಾರಥಿ ಸುವರ್ಣ ರಥ”ವೆಂಬ ಚಿನ್ನದ ರಥವನ್ನು ಸುಮಾರು 18 ಕೋಟಿ ವೆಚ್ಚದಲ್ಲಿ ಸಮರ್ಪಿಸಲು ಸಂಕಲ್ಪಿಸಿದ್ದು, ಈ ಯೋಜನೆಯ ಪ್ರಾರಂಭ ಮುಹೂರ್ತವನ್ನು ನಡೆಸಲಾಗುವುದು.

ಮಾಹೆ ಸಹಕುಲಾಧಿಪತಿಗಳು ಮತ್ತು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್ ಬಲ್ಲಾಳ್, ಎಲ್.ಐ.ಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕರಾದ ರಾಜೇಶ್ ಮುಧೋಳ್, ಯು.ಪಿ.ಸಿ.ಎಲ್. ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಕಿಶೋರ್ ಆಳ್ವ, ಕರಾವಳಿ ಗ್ರೂಪ್ ಆಫ್ ಕಾಲೇಜ್ ನ ನಿರ್ದೇಶಕ ಗಣೇಶ್ ರಾವ್, ಉಡುಪಿ ನಂದಿಕೂರಿನ ಪ್ರಾಜ್ ಇಂಡಸ್ಟ್ರೀಸ್‌ನ ಅಶೋಕ್ ಶೆಟ್ಟಿ, ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೇಂಜ ಶ್ರೀಧರ ತಂತ್ರಿಗಳು, ಬ್ರಹ್ಮಾವರ ರೋಟರಿಯ ನಿಯೋಜಿತ ಗವರ್ನರ್ ಬಿ.ಎಮ್ ಭಟ್ ಮತ್ತು ಆಕ್ಸಿಸ್ ಬ್ಯಾಂಕ್ ನ ಉಪಾಧ್ಯಕ್ಷ ಸುರೇಶ್ ರಾವ್, ಬ್ರಹ್ಮಾವರ ಜಿ.ಎಮ್ ವಿದ್ಯಾನಿಕೇತನದ ಪ್ರಕಾಶ್ ಚಂದ್ರ ಶೆಟ್ಟಿ ಮುಂತಾದ ಹಲವು ಗಣ್ಯರ ಘನ ಉಪಸ್ಥಿತಿಯಲ್ಲಿ ಈ ಯೋಜನೆಯ ಬಗ್ಗೆ ಸಮಾಜದ ಗಣ್ಯರಿಂದ 108 ಚಿನ್ನದ ನಾಣ್ಯಗಳ ಸಮರ್ಪಣೆ ಹಾಗೂ ಶ್ರೀಗಳವರಿಗೆ ಪುಷ್ಪಾರ್ಚನೆಯನ್ನು ಹಮ್ಮಿಕೊಳ್ಳಲಾಗಿದೆ.

ಅಲ್ಲದೇ, ಸೌರಮಾನ ಯುಗಾದಿಯ ನೂತನ ಕ್ರೋಧಿ ಸಂವತ್ಸರದ ಶುಭ ಸಂದೇಶವನ್ನು ಪೂಜ್ಯ ಪರ್ಯಾಯ ಸ್ವಾಮಿಗಳು ನೀಡುವರು. ಶ್ರೀಕೃಷ್ಣನ ಎಲ್ಲಾ ಭಕ್ತಾದಿಗಳೂ, ಶ್ರೀಗಳವರ ಅಭಿಮಾನಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆ ತಿಳಿಸಿದೆ.

ಸುವರ್ಣ ರಥಕ್ಕೆ ಚಿನ್ನದ ನಾಣ್ಯವನ್ನು ಸಮರ್ಪಿಸಲಿಚ್ಛಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ. 7676215242, 9880835626

Leave a Reply

Your email address will not be published. Required fields are marked *

error: Content is protected !!