ಪತಂಜಲಿಯ ಎಲ್ಲಾ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆದೇಶಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ಪತಂಜಲಿ ಆಯುರ್ವೇದದ ಜಾಹೀರಾತುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಉತ್ತರಾಖಂಡದ ಔಷದ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರವನ್ನು ಸುಪ್ರೀಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ ಎಲ್ಲ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆದೇಶಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್ನಿಂದ ಬರುವ ಎಲ್ಲ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಔಷದ ನಿಯಂತ್ರಣ ಇಲಾಖೆ ಮತ್ತು ಆಯುಷ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಪತಂಜಲಿ ಆಯುರ್ವೇದದ ಜಾಹೀರಾತುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಉತ್ತರಾಖಂಡದ ಔಷದ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರವನ್ನು ಸುಪ್ರೀ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಈ ವಿಷಯವನ್ನು ಯಾವುದೇ ಕಾರಣಕ್ಕೂ ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದಿದೆ. ಇದಾದ ಬಳಿಕ ದಿನೇಶ್ ಗುಂಡೂರಾವ್ ಈ ಕ್ರಮ ಕೈಗೊಂಡಿದ್ದಾರೆ.
ಬಾಬಾ ರಾಮದೇವ್ ಅವರು ಆಯುರ್ವೇದ ಮತ್ತು ಭಾರತೀಯ ವೈದ್ಯ ಪದ್ಧತಿಗೆ ಅಪಖ್ಯಾತಿ ತಂದಿದ್ದಾರೆ. ಆರೋಗ್ಯ, ವ್ಯಾಪಾರ ಅಥವಾ ರಾಜಕೀಯದಲ್ಲಿ ನಿಮಗೆ ಕುರುಡು ನಂಬಿಕೆ ಇದ್ದಾಗ ಹೀಗಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದಾರಿ ತಪ್ಪಿಸುವಂತಹ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕೆ ಸಂಬಂಧಿಸಿದಂತೆ ಯೋಗಗುರು ಬಾಬಾ ರಾಮದೇವ್ ಹಾಗೂ ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಬೇಷರತ್ತಾಗಿ ಕ್ಷಮೆ ಕೋರಿ ಸಲ್ಲಿಸಿದ ಪ್ರಮಾಣಪತ್ರಗಳನ್ನು ಒಪ್ಪಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪತಂಜಲಿ ಆಯುರ್ವೇದ ಕಂಪನಿಯು ಜನರ ದಾರಿ ತಪ್ಪಿಸುವಂತಹ ಜಾಹೀರಾತುಗಳನ್ನು ನೀಡುತ್ತಿದೆ ಎಂದು ದೂರಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ರೀತಿ ಹೇಳಿದೆ.