ಧರ್ಮದ ಹೆಸರಲ್ಲಿ ಮತವನ್ನು ಕೇಳದೇ ತಾವು ಮಾಡಿದ ಸಾಧನೆ ಮುಂದಿಟ್ಟು ಮತಯಾಚಿಸಿ- ಜಯಪ್ರಕಾಶ್ ಹೆಗ್ಡೆ

ಉಡುಪಿ ಎ.11(ಉಡುಪಿ ಟೈಮ್ಸ್ ವರದಿ) ನಾಯಕರ ಹೆಸರಲ್ಲಿ ಮತಯಾಚಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರಿಗೆ ಪಕ್ಷವೇ ಪಾಠ ಕಲಿಸಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಪರೋಕ್ಷವಾಗಿ ಶೋಭಾ ಕರಂದ್ಲಾಜೆ ಅವರನ್ನು ಟೀಕಿಸಿದ್ದಾರೆ.

ಧರ್ಮದ ಹೆಸರಲ್ಲಿ ಮತವನ್ನು ಕೇಳದೇ ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆಯನ್ನು ಮುಂದಿಟ್ಟು ಮತ ಯಾಚಿಸಬೇಕು ಎಂದು ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದ ಮಥುರ ಕಂಫರ್ಟ್ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಈ ಕೇಂದ್ರ ಸಚಿವರು ಮೋದಿ ಹೆಸರಲ್ಲಿ ಮತಯಾಚಿಸಿ ಗೆದ್ದಿದ್ದಾರೆ. ಈಗಿನ ಅಭ್ಯರ್ಥಿಯೂ ಅದೇ ಹಾದಿಯಲ್ಲಿ ಸಾಗಿದ್ದಾರೆ. ಸಚಿವರಿಗೆ ಈ ಬಾರಿ ನಾಯಕರ ಹೆಸರಲ್ಲಿ ಮತ ಕೇಳಿ ಗೆಲುವು ಸಾಧ್ಯವಿಲ್ಲ ಎಂದು ಪಕ್ಷವೇ ಪಾಠ ಕಳಿಸಿದೆ ಎಂದು ತಿಳಿಸಿದರು.

ಯಾವುದೇ ಸಾಧನೆ ಮಾಡದೇ ಪಕ್ಷದ ನಾಯಕರ ಹೆಸರಲ್ಲಿ ಮತಯಾಚನೆ ಮಾಡುವುದಲ್ಲ. ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಮಾಡಿದಂತಹ ಅಭಿವೃದ್ಧಿ ಕಾರ್ಯಗಳು ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸಮಾಜದಲ್ಲಿ ಸಮಾನತೆಯನ್ನು ತರಲು ಏನು ಮಾಡಬೇಕು ಎಂಬುದರ ಬಗ್ಗೆ ಕಾಳಜಿ ಇರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ಎಂ.ಎ.ಗಫೂರ್, ರೋನಿ ಕರ್ಕಡಾ, ಅಮೃತ ಕೃಷ್ಣಮೂರ್ತಿ, ಯುವರಾಜ್ ಪುತ್ತೂರು, ಸದಾನಂದ ಕಾಂಚನ್, ಮಂಜಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!