ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ: ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್ ಸಹಿತ ಹಲವರ ವಿರುದ್ಧ ದೂರು ದಾಖಲು

ಬೆಂಗಳೂರು : ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದಡಿ ದುಷ್ಕರ್ಮಿಗಳ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕುಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು ಮುಂತಾದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಫೇಕ್ ನ್ಯೂಸ್‌ಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಯಾರೂ ಕೂಡ ಅಂತಹ ಕಾನೂನುಬಾಹಿರ ಕೃತ್ಯಕ್ಕೆ ಕೈಹಾಕಬಾರದು ಎಂದು ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದೆವು.

ಆದರೂ ನನ್ನ ವಿರುದ್ಧವೇ ಸುಳ್ಳು ಸುದ್ದಿ ಸೃಷ್ಟಿಸಿ, ಜನರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಕಾನೂನಿನ ಮೂಲಕ ಈ ಪ್ರಕರಣವನ್ನು ತಾರ್ಕಿಕ ಅತ್ಯಂಕ್ಕೆ ಕೊಂಡೊಯ್ಯುತ್ತೇವೆ ಎಂದು ತಾಕೀತು ಮಾಡಿದ್ದಾರೆ.

ಅಲ್ಲದೆ, ಬಿಜೆಪಿ – ಜೆಡಿಎಸ್‌ ಮಿತ್ರಮಂಡಳಿ ಕೃಪಾಪೋಷಿತ ಕಿಡಿಗೇಡಿಗಳು ವಾರ್ತಾಪತ್ರಿಕೆಯನ್ನು ಹೋಲುವ ಸುಳ್ಳು ಸುದ್ದಿಯ ತುಣುಕೊಂದನ್ನು ಸೃಷ್ಟಿಸಿ, ಅದರಲ್ಲಿ ಜನರ ಕೋಮುಭಾವನೆ ಕೆರಳಿಸುವ ಸುದ್ದಿಯನ್ನು ತುಂಬಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಈ ಬಗ್ಗೆ ನಮಗೆ ಮಾಹಿತಿ ಇದ್ದು, ಆದಷ್ಟು ಬೇಗನೆ ಅವರನ್ನು ನ್ಯಾಯದ ಕೈಗಳಿಗೆ ಒಪ್ಪಿಸಲಾಗುವುದು. ರಾಜಕೀಯ ವಿರೋಧಿಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಎದುರಿಸಲಾಗದೆ ಇಂತಹ ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಬಿಜೆಪಿ ಮತ್ತು ಜೆಡಿಎಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ.

ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!