ಮಂಗಳೂರು: ಎ.14ರಂದು ನಡೆಯಬೇಕಿದ್ದ ಮೋದಿ ಸಮಾವೇಶ ರದ್ದು, ರೋಡ್ ಶೋ ತಯಾರಿ.!

ಮಂಗಳೂರು, ಏ 10: ಚುನಾವಣಾ ರಣತಂತ್ರ ರೂಪಿಸುತ್ತಿರುವ ಬಿಜೆಪಿ ಈ ಬಾರಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ತಯಾರಿಯಲ್ಲಿದೆ. ಇದೇ ಉತ್ಸಾಹದಲ್ಲಿ ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ.

ಏಪ್ರಿಲ್ 14ರಂದು ಮಂಗಳೂರಿನಲ್ಲಿ ಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವುದಕ್ಕೆ ಸಿದ್ಧತೆ ನಡೆಸಲಾಗಿತ್ತು. ಇದಕ್ಕಾಗಿ ಇಂದು ಬೆಳಗ್ಗೆ ಮೈದಾನದಲ್ಲಿ ಚಪ್ಪರ ಮುಹೂರ್ತವನ್ನೂ ನಡೆಸಲಾಗಿತ್ತು. ಜರ್ಮನ್ ನಿರ್ಮಿತ ಬೃಹತ್ ಪೆಂಡಾಲ್ ಹಾಕಲು ತಯಾರಿ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ನಡೆದ ಬದಲಾವಣೆಯಿಂದ ಬೃಹತ್ ಸಮಾವೇಶವನ್ನು ರದ್ದು ಪಡಿಸಲಾಗಿದ್ದು, ಇದರ ಬದಲು ಮಂಗಳೂರು ನಗರದಲ್ಲಿ ಕೇವಲ ರೋಡ್ ಶೋ ನಡೆಸುವುದಕ್ಕೆ ಸಿದ್ಧತೆ ನಡೆಸಲಾಗಿದೆ.

ಭದ್ರತೆಯ ಕಾರಣಕ್ಕೆ ಪ್ರಧಾನಿ ಮೋದಿ ಆಯಕಟ್ಟಿನ ರಸ್ತೆಗಳಲ್ಲಿ ಸಂಚರಿಸಲು ಎಸ್ ಪಿಜಿ ತಂಡ ಅವಕಾಶ ನೀಡುವುದಿಲ್ಲ, ಇದಲ್ಲದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಶೋ ನಡೆಸುವುದಕ್ಕೂ ಅವಕಾಶವಿಲ್ಲ. ರೋಡ್ ಶೋ ನಡೆಸುವುದಕ್ಕೆ ಎಸ್ಪಿಜಿ ಭದ್ರತೆ ಪರಿಶೀಲಿಸಿದ ನಂತರವೇ ಯಾವ ರಸ್ತೆಯಲ್ಲಿ ರೋಡ್ ಶೋ ನಡೆಸುವುದೆಂದು ನಿರ್ಧಾರ ಮಾಡಬೇಕಾಗುತ್ತದೆ. ಏರ್ಪೋರ್ಟ್ ರಸ್ತೆಯಲ್ಲೇ ಮಂಗಳೂರು ನಗರದವರೆಗೆ ರೋಡ್ ಶೋ ನಡೆಸುತ್ತಾರೆಯೇ ಅಥವಾ ಮಂಗಳೂರು ನಗರದ ಒಳಭಾಗದ ನೆಹರು ಮೈದಾನದ ಆಸುಪಾಸಿನಲ್ಲಿ ರೋಡ್ ಶೋ ನಡೆಸುತ್ತಾರೆಯೇ ಮತ್ತು ಎಷ್ಟು ಹೊತ್ತಿಗೆ ಮಾಡಲಿದ್ದಾರೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!