ಕುಂದಾಪುರ: ಭೀಕರ ಅಪಘಾತ- ಓರ್ವ ಮೃತ್ಯು, ಇಬ್ಬರ ಸ್ಥಿತಿ ಗಂಭೀರ
ಕುಂದಾಪುರ, ಏ 09: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೋ ಎದುರುಗಡೆ ನಡೆದಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕೇರಳ ರಾಜ್ಯದ ಪಾಂಡಿಚೇರಿ ಎಂಬಲ್ಲಿಗೆ ಹಿಂತಿರುಗುತ್ತಿದ್ದ ಮೂವರು ಪ್ರಯಾಣಿಸುತ್ತಿದ್ದ ಟೊಯೋಟೊ ಇನ್ನೋವಾ ಕಾರು ಅಪಘಾತಗೀಡಾಗಿದೆ.
ಕುಂದಾಪುರ ಉಡುಪಿ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಸಮೀಪದ ಕೆ ಎಸ್ ಆರ್ ಟಿ ಸಿ ಡಿಪೋ ಎದುರುಗಡೆ ಫ್ಲೈ ಓವರ್ ಮೇಲೆ ಚಲಿಸುತ್ತಿದ್ದ ಕಾರು ಏಕಾಏಕಿ ಸರ್ವಿಸ್ ರಸ್ತೆ ಮತ್ತು ಹೆದ್ದಾರಿ ನಡುವಿನ ಡಿವೈಡೆರ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಡಿಕ್ಕಿ ಹೊಡೆದ ಫಾರ್ಚುನರ್ ಇನ್ನೋವಾ ಕಾರು ಕಬ್ಬಿಣದ ಗ್ರಿಲ್ ಗಳನ್ನು ಮುರಿದು ಸರ್ವಿಸ್ ರಸ್ತೆ ಮೇಲೆ ತಲೆಕೆಳಗಾಗಿ ಬಿದ್ದಿದೆ ಸಂಪೂರ್ಣ ನುಚ್ಚು ನೂರಾಗಿರುವ ಇನ್ನೋವಾ ಕಾರಿನಲ್ಲಿದ್ದ ಮೂವರ ಪೈಕಿ ಒಬ್ಬರು ಜೀವನ್ಮರಣ ಸ್ಥಿತಿಯಲ್ಲಿ ಇದ್ದವರು ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.ಉಳಿದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದ ಸಂದರ್ಭ ಸರ್ವಿಸ್ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಸರ್ವಿಸ್ ರಸ್ತೆಯಲ್ಲಿ ಮಗುಚಿ ಬಿದ್ದ ಕಾರಿನಿಂದಾಗಿ ಸಂಚಾರ ಸಮಸ್ಯೆ ಉಂಟಾಗಿದ್ದು ಸ್ಥಳೀಯ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಟ್ಟರು.