ಬಡಗಬೆಟ್ಟು ಕ್ರೆಡಿಟ್ ಕೋ-ಆ.ಸೊಸೈಟಿಗೆ 16.85 ಕೋ.ರೂ ಲಾಭ
ಉಡುಪಿ: ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ 2023-24ನೇ ಸಾಲಿನಲ್ಲಿ ರೂ. 2,378.78 ಕೋಟಿ ವಾರ್ಷಿಕ ವಹಿವಾಟು ನಡೆಸಿ ರೂ. 16.85 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ನಗರದ ಜೋಡುಕಟ್ಟೆಯ ಡಯಾನ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನೂತನ ಅಧ್ಯಕ್ಚರಾದ ಬಿ.ಜಯಕರ್ ಶೆಟ್ಟಿಯವರು, ಸಹಕಾರ ಕ್ಷೇತ್ರದಲ್ಲಿ 106 ವರ್ಷಗಳ ಸಾರ್ಥಕ ಸೇವೆಯನ್ನು ನೀಡುತ್ತಿರುವ ಸಂಘವು 2023-24 ಆರ್ಥಿಕ ವರ್ಷಾಂತ್ಯಕ್ಕೆ ಇದ್ದಂತೆ 18,307 ಸದಸ್ಯರಿಂದ 4.77 ಕೋ.ರೂ ಪಾಲು ಬಂಡವಾಳ ಹೊಂದಿರುತ್ತದೆ ಎಂದರು.
506.64 ಕೋ.ರೂ ಠೇವಣಿ, 400.68 ಕೋ.ರೂ ಸಾಲ
ವರದಿ ವರ್ಷಾಂತ್ಯಕ್ಕೆ ಸಂಘವು ಒಟ್ಟು ರೂ.506.64 ಕೋಟಿ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇ.12.23 ಏರಿಕೆ ಕಂಡಿದೆ. ಸದಸ್ಯರಿಗೆ ಗೃಹನಿರ್ಮಾಣ, ವಾಹನ ಖರೀದಿಯ ಬಗ್ಗೆ, ಜಮೀನು ಖರೀದಿ ಮತ್ತು ಅಭಿವೃದ್ಧಿಯ ಬಗ್ಗೆ, ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯ ನಿರ್ಮಾಣದ ಬಗ್ಗೆ, ಸ್ವಉದ್ಯೋಗಕ್ಕಾಗಿ, ವಿದ್ಯಾಭ್ಯಾಸ, ಮದುವೆ, ಚಿನ್ನಾಭರಣಗಳ ಈಡಿನ ಮೇಲೆ ಹಾಗೂ ಮನೆವಾರ್ತೆಗಳಿಗೆ ಸೂಕ್ತ ದಾಖಲೆಗಳನ್ನು ಪಡೆದುಕೊಂಡು ಸಾಲವನ್ನು ವಿತರಿಸುತ್ತಿದ್ದು ವರದಿ ವರ್ಷಾಂತ್ಯಕ್ಕೆ 400.68 ಕೋ.ರೂ ಸದಸ್ಯರ ಹೊರಬಾಕಿ ಸಾಲ ಇರುತ್ತದೆ. 84.40 ಕೋ.ರೂ ನಿಧಿಗಳು ಇದ್ದು, ರೂ.591.05 ಕೋಟಿ ದುಡಿಯುವ ಬಂಡವಾಳ ಆಗಿರುತ್ತದೆ. ತನ್ನ ಕಾರ್ಯಕ್ಷೇತ್ರದಲ್ಲಿ 11 ಶಾಖೆಗಳನ್ನು ಹೊಂದಿದ್ದು ಈ ಪೈಕಿ 8 ಶಾಖೆಗಳು ಸಂಘದ ಸ್ವಂತ ನಿವೇಶನ ಹೊಂದಿರುತ್ತದೆ.
ಸತತವಾಗಿ 2 ಬಾರಿ ರಾಷ್ಟç ಪ್ರಶಸ್ತಿ, 8 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ, 17 ಬಾರಿ ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನು ಪಡೆದು ಯಶಸ್ವೀ ಕ್ರೆಡಿಟ್ ಸೊಸೈಟಿಯಾಗಿ ಸಂಘವು ಗುರುತಿಸಿಕೊಂಡಿದೆ. ಕೇವಲ ವ್ಯವಹಾರ ಮಾಡಿ ಲಾಭ ಗಳಿಸುವ ದೃಷ್ಟಿಯನ್ನು ಮಾತ್ರ ಇಟ್ಟುಕೊಳ್ಳದೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ವಾರ್ಷಿಕ ಸುಮಾರು ರೂ. 20 ಲಕ್ಷದಷ್ಟು ಶಿಕ್ಷಣದ ಬಗ್ಗೆ, ಆರೋಗ್ಯದ ಬಗ್ಗೆ, ಸಾಮಾಜಿಕ ಕಾರ್ಯಕ್ರಮಗಳಿಗೆ ತೊಡಗಿಸುತ್ತಾ ಬಂದಿರುತ್ತದೆ. ಪ್ರಸ್ತುತ ಉಡುಪಿ ಜಿಲ್ಲೆಯಾದ್ಯಂತ 11 ಶಾಖೆಗಳನ್ನು ಹೊಂದಿ ವ್ಯವಹರಿಸುತ್ತಿದೆ ಎಂದರು.
ಚೇತನಾ ಮೊಬೈಲ್ ಆ್ಯಪ್…
ಡಿಜಿಟಲೀಕರಣದ ಹೆಜ್ಜೆಯಾಗಿ ಅಭಿವೃದ್ಧಿಪಡಿಸಿದ “ಚೇತನಾ ಮೊಬೈಲ್ ಆ್ಯಪ್” ಮೂಲಕ ಗ್ರಾಹಕರು ತಾವಿರುವಲ್ಲಿಯೇ ತಮ್ಮ ಖಾತೆಯಿಂದ IMPS/ NEFT /RTGS ಮೂಲಕ ಮೊಬಲಗು ವರ್ಗಾವಣೆ, ಎಸ್‌ಬಿ ಹಾಗೂ ಸಾಲ ಖಾತೆಗಳಿಗೆ ಮೊಬಲಗು ವರ್ಗಾಯಿಸುವುದು, ಸಂಘದ ನೂತನ ಯೋಜನೆಯ ಕುರಿತಾದ ಮಾಹಿತಿಗಳನ್ನೂ ಪಡೆಯಬಹುದಾಗಿದ್ದು, ಸದ್ರಿ ಆ್ಯಪ್ ಬಗ್ಗೆ ಬಳಕೆದಾರರಿಂದ ಉತ್ತಮ ಸ್ಪಂದನೆ ದೊರೆತಿರುತ್ತದೆ. ಗೂಗಲ್ ಪ್ಲೇ-ಸ್ಟೋರ್‌ನಲ್ಲಿ ಲಭ್ಯವಿರುವ ಈ ಆ್ಯಪ್‌ನ ಪ್ರಯೋಜನ ಪಡೆಯುವ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಶಾಖೆಗೆ ತೆರಳಿ ಮಾಹಿತಿ ಪಡೆಯುವಂತೆ ತಿಳಿಸಿದರು.
ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ನೀಡುವ ಸಲುವಾಗಿ ಈಗಾಗಲೇ ಸೇಫ್ ಲಾಕರ್ ಸೌಲಭ್ಯ, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, NEFT/RTGS ಸೇವಾ ಸೌಲಭ್ಯ, ಮನಿ ಟ್ರಾನ್ಸ್ಫರ್ ಸೌಲಭ್ಯ, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್, ಆರೋಗ್ಯ ವಿಮೆ, ಸಾಮಾನ್ಯ ವಿಮೆ, “0” ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್ಕಾಲ್ ಸರ್ವಿಸ್, ಉಚಿತ ಎಸ್.ಎಂ.ಎಸ್ ಸೌಲಭ್ಯ ನೀಡುತ್ತಿದ್ದು ಸದಸ್ಯ ಗ್ರಾಹಕರು ಈ ಎಲ್ಲಾ ಸೌಲಭ್ಯಗಳ ಪ್ರಯೋಜನ ಪಡೆಯುವಂತೆ ತಿಳಿಸಿದ್ದಾರೆ.
ಮುಂದಿನ ಯೋಜನೆಗಳು
ಮುಂದಿನ ವರದಿ ವರ್ಷದಲ್ಲಿ ರೂ.600 ಕೋಟಿ ಠೇವಣಿ, ರೂ.500 ಕೋಟಿ ಹೊರಬಾಕಿ ಸಾಲ ನೀಡುವ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಉಡುಪಿಯ ಹೃದಯ ಭಾಗದಲ್ಲಿ ಖರೀದಿಸಿರುವ 1 ಎಕ್ರೆ ಆಸ್ತಿಯಲ್ಲಿ ಅಂದಾಜು ರೂ.10 ಕೋಟಿ ವೆಚ್ಚದಲ್ಲಿ “ಸಹಕಾರ ಸೌಧ” ನಿರ್ಮಾಣದ ಯೋಜನೆಯನ್ನು ಹಮ್ಮಿಕೊಂಡಿ ರುತ್ತೇವೆ. ಸಂಘದ ಸದಸ್ಯ ಗ್ರಾಹಕರಿಗೆ ಉಪಯುಕ್ತವಾಗುವ ಹೊಸ ಹೊಸ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನ ಮಾಡುವ ಚಿಂತನೆಯನ್ನು ಹಮ್ಮಿಕೊಂಡಿದ್ದು ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾಗಿ ಮುಂದುವರೆಸುವರೇ ಸರ್ವರ ಸಹಕಾರವನ್ನು ಯಾಚಿಸಲಾಗಿದೆ.
ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುಯೆಲ್, ಆಡಳಿತ ಮಂಡಳಿಯ ಸದಸ್ಯರಾದ ಪುರುಷೋತ್ತಮ ಪಿ. ಶೆಟ್ಟಿ, ಉಮಾನಾಥ ಎಲ್, ವಿನಯ ಕುಮಾರ್ ಟಿ.ಎ, ಪದ್ಮನಾಭ ನಾಯಕ್, ಸೈಯದ್ ಅಬ್ದುಲ್ ರಜಾಕ್, ಸದಾಶಿವ ನಾಯ್ಕ್, ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಪತ್ರಿಕಾಗೋಷ್ಠ್ಠಿಯಲ್ಲಿ ಉಪಸ್ಥಿತರಿದ್ದರು.