ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಭಜನೆಯ ರೋಗ ಅನಾವರಣ: ಸಿ.ಟಿ.ರವಿ

ಮೈಸೂರು, ಏ 08: ಕಾಂಗ್ರೆಸ್ ಪಕ್ಷದ ಈ ಬಾರಿಯ ಪ್ರಣಾಳಿಕೆಯನ್ನು ಗಮನಿಸಿದರೆ ವಿಭಜನೆಯ ರೋಗ ಅದಕ್ಕೆ ಆವರಿಸಿಕೊಂಡಂತಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಆಕ್ಷೇಪಿಸಿದರು.

ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ಬ್ರಿಟಿಷರು, ಕಾಂಗ್ರೆಸ್ಸಿಗರು ಮತ್ತು ಮುಸ್ಲಿಂ ಲೀಗ್ ಸೇರಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿ ಭಾರತವನ್ನು ವಿಭಜಿಸಿದ್ದರು. ಆ ವಿಭಜನೆಯ ರೋಗ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಡಿಮೆ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅವರು ಸಮಾಜವನ್ನು ಜಾತಿ ಹೆಸರಿನಲ್ಲಿ, ದೇಶವನ್ನು ಪ್ರಾದೇಶಿಕತೆಯ ಹೆಸರಿನಲ್ಲಿ, ಮತೀಯವಾದಕ್ಕೆ ಕುಮ್ಮಕ್ಕು ಕೊಡುವ ಮೂಲಕ ಮತ್ತೆ ಮತ್ತೆ ವಿಭಜಿಸುವ ಮಾತನ್ನೇ ಆಡುತ್ತಿದ್ದಾರೆ. ವಿಭಜನೆಯ ರೋಗ ಅವರನ್ನು ಆವರಿಸಿಕೊಂಡಿದೆ ಎಂದು ಟೀಕಿಸಿದರು. ಕಾಂಗ್ರೆಸ್ ತನ್ನ ಸ್ಥಾಪನೆಯಿಂದ ಮೊದಲುಗೊಂಡು ಕಾಲಕಾಲಕ್ಕೆ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಂಡು ಬಂದುದನ್ನು ನಾವು ಗಮನಿಸಬಹುದು. ಆಲೆನ್ ಒಕ್ಟೋವಿಯೋ ಹ್ಯೂಮ್ ಕಾಂಗ್ರೆಸ್ ಸ್ಥಾಪಿಸಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ಉದ್ದೇಶ ಅವರದಾಗಿರಲಿಲ್ಲ. ಎರಡು ದಶಕಗಳ ಬಳಿಕ ಅದೊಂದು ರಾಷ್ಟ್ರಭಕ್ತ ಸಂಘಟನೆಯಾಗಿ, ಆಂದೋಲನವಾಗಿ ಪರಿವರ್ತನೆಗೊಂಡಿತು ಎಂದು ವಿಶ್ಲೇಷಿಸಿದರು.

ಏ.14ರಂದು ಮತ್ತೆ ಪ್ರಧಾನಿಯವರ ರಾಜ್ಯ ಭೇಟಿ: ನಾಮಪತ್ರ ಸಲ್ಲಿಕೆಯಾದ ಬಳಿಕ ಇದೇ 14ರಂದು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿಜೀ ಅವರು ಭಾಗವಹಿಸಲಿದ್ದಾರೆ ಎಂದು ಸಿ.ಟಿ.ರವಿ ಅವರು ತಿಳಿಸಿದರು.

ಚುನಾವಣೆಯ ಕಾವು ಮತ್ತು ಪ್ರಚಾರದ ಭರಾಟೆ ಪ್ರಾರಂಭವಾಗಿದೆ. ಚುನಾವಣೆ ಘೋಷಣೆ ಆದ ನಂತರ ಪ್ರಧಾನಮಂತ್ರಿಯವರು ಕಲಬುರ್ಗಿ ಮತ್ತು ಶಿವಮೊಗ್ಗದಲ್ಲಿ ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!