5,8,9,11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗೆ ಅನುಮತಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ಹೊಸದಿಲ್ಲಿ: ಕರ್ನಾಟಕ ಸ್ಟೇಟ್ ಬೋರ್ಡ್‌ಗೆ ಸಂಯೋಜಿತವಾಗಿರುವ 5,8,9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಅನುಮತಿಸಿ ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠ ಹೊರಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ವಿಧಿಸಿದೆ.
ಯಾವುದೇ ಶಾಲೆ ಘೋಷಿಸಿರುವ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ತಡೆಹಿಡಿಯಬೇಕು ಮತ್ತು ಯಾವುದೇ ಉದ್ದೇಶಕ್ಕೆ ಪರಿಗಣಿಸಬಾರದು ಹಾಗೂ ಇಲ್ಲಿಯ ತನಕ ಈ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ವಿದ್ಯಾರ್ಥಿಗಳ ಹೆತ್ತವರಿಗೆ ತಿಳಿಸದೇ ಇದ್ದರೆ ಮುಂದಕ್ಕೆ ತಿಳಿಸಬಾರದು ಎಂದೂ ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರ ಪೀಠ ಆದೇಶಿಸಿದೆ.
ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅವರ ಹೆತ್ತವರಿಗೆ, ಶಾಲೆಗಳಿಗೆ ಮತ್ತು ಶಾಲಾಡಳಿತಗಳಿಗೆ ಅನಗತ್ಯ ಒತ್ತಡವನ್ನು ಈ ಬೋರ್ಡ್ ಪರೀಕ್ಷೆಗಳ ಮೂಲಕ ರಾಜ್ಯ ಸರ್ಕಾರ ಸೃಷ್ಟಿಸಿದ ಜ್ವಲಂತ ಉದಾಹರಣೆ ಇದಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಮಕ್ಕಳ ಹಕ್ಕುಗಳ ಕಾಯಿದೆ ಮತ್ತು ಶಿಕ್ಷಣ ಹಕ್ಕು ಕಾಯಿದೆ 2009ಗೆ ಅನುಗುಣವಾಗಿ ಹೈಕೋರ್ಟ್ ಆದೇಶ ಇರಲಿಲ್ಲ ಎಂದು ಹೊರನೋಟಕ್ಕೆ ತಿಳಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ, ಕರ್ನಾಟ ಮತ್ತು ಇತರರು ಬೋರ್ಡ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದೆ.