ಬ್ರಹ್ಮಾವರ ಬ್ಲಾಕ್: ಜಯಪ್ರಕಾಶ್ ಹೆಗ್ಡೆ ಚುನಾವಣಾ ಪ್ರಚಾರ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಶನಿವಾರ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ವಿವಿದೆಡೆಗಳಲ್ಲಿ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ನಡೆಸಿದರು.

ಬೆಳಗಿನಿಂದ ಅವರು ಕೆಮ್ಮಣ್ಣು ಹೊಳೆಬದಿ, ಸಂತೆಕಟ್ಟೆ ಜಂಕ್ಷನ್, ಕೊಳಲಗಿರಿ ಜಂಕ್ಷನ್, ಗಾಂಧಿನಗರ ಜಂಕ್ಷನ್, ಬೇಳೂರು ಜಡ್ಡ್ ಸರ್ಕಲ್, ಬ್ರಹ್ಮಾವರದ ಅಂಬಾ ಸಭಾಂಗಣ, ನೀಲಾವರ ಕ್ರಾಸ್ ಜಂಕ್ಷನ್, ಪೇತ್ರಿ, ಕೆಳಕರ್ಜೆ, ಕಳ್ತೂರು ಸಂತೆಕಟ್ಟೆ, ಮುದ್ದೂರು ಜಂಕ್ಷನ್, ನಂಚಾರುಗಳಲ್ಲಿ ನೆರೆದ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದಿನ ಸಂಸದರಿಗೆ 10 ವರ್ಷಗಳ ಕಾಲವನ್ನು ನೀಡಿದರೆ ನನಗೆ ಸಿಕ್ಕಿದ್ದು ಕೇವಲ 2 ವರ್ಷಗಳ ಅವಧಿ. ಈ ಚಿಕ್ಕ ಅವಧಿಯಲ್ಲಿ ಹಲವು ರಸ್ತೆ ಕಾಮಗಾರಿಗಳಿಗೆ ಅನುಮೋದನೆಯನ್ನು ಪಡೆಯುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ಆದರೆ ಬಳಿಕ ಬಂದ ಸಂಸದರು ಆ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೆಚ್ಚಿನ ಕಾಮಗಾರಿಗಳು ಕೆಲಸಕ್ಕಾಗಿ ಗುತ್ತಿಗೆದಾರರಾಗುವ ಬದಲು ಗುತ್ತಿಗೆದಾರರಿಗಾಗಿ ಕೆಲಸಗಳು ಎನ್ನುವಂತಾಗಿದೆ ಎಂದರು.

ಕಲ್ಯಾಣಪುರ ಸಂತೆಕಟ್ಟೆ ಹೂಡೆ ರಸ್ತೆ, ಮೂಡುಕುದ್ರು ಪಡುಕುದ್ರು ಸೇತುವೆಗಳು ನನ್ನ ಅವಧಿಯಲ್ಲಿ ನಿರ್ಮಾಣವಾಗಿ ರುವುದು ಇತಿಹಾಸ. ನಾವು ನೆನಪು ಮಾಡಿಕೊಳ್ಳಲು ಹಲವು ಕಾಮಗಾರಿಗಳಿದ್ದರೆ ಬಿಜೆಪಿ ಸಂಸದರಿಗೆ ಯಾವುದೇ ಹೇಳಿಕೊಳ್ಳುವ ಕಾಮಗಾರಿಗಳಿಲ್ಲ. ಅದಕ್ಕಾಗಿ ಈ ಭಾಗಕ್ಕೆ ಅವರ ಭೇಟಿ ವಿರಳವಾಗಿತ್ತು ಎಂದರು.

ರಾಷ್ಟ್ರೀಯ ನಾಯಕರ ಹೆಸರನ್ನು ಹೇಳಿ ಮತವನ್ನು ಕೇಳಿದರೆ ಅದು ನನಗೆ ನೀಡುವ ಮತವಾಗುವುದಿಲ್ಲ. ಆದ್ದರಿಂದ ನಾನು ಕ್ಷೇತ್ರದಲ್ಲಿ ಕೆಲಸ ಮಾಡಬೇಕಾದ ಅಗತ್ಯವಿಲ್ಲ. ಹಾಗಾದಲ್ಲಿ ಮುಂದಿನ ಚುನಾವಣೆಗೆ ಮತ್ತೆ ರಾಷ್ಟ್ರೀಯ ನಾಯಕರ ಹೆಸರನ್ನು ಹೇಳುವ ಪರಿಸ್ಥಿತಿ ಉಂಟಾಗುತ್ತದೆ ಹೊರತು ಕ್ಷೇತ್ರದ ಯಾವುದೇ ಅಭಿವೃದ್ಧಿಯಾಗುವುದಿಲ್ಲ ಎಂದು ಹೆಗ್ಡೆ ನಡಿದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದರು. ಆದರೆ ಒಂದೇ ಒಂದು ಉದ್ಯೋಗ ನೀಡುವ ಕೆಲಸ ಆಗಿಲ್ಲ. ಇದ್ದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿರುವುದರಿಂದ ಇದ್ದ ಕೆಲಸವನ್ನು ಕೂಡ ಕಳೆದುಕೊಳ್ಳುವ ಕೆಲಸ ಆಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಗಳಿಗೆ ಅನುಕೂಲವಾಗುತ್ತಿದೆ ಎಂದು ಜನರಿಗೆ ಮನವರಿಕೆ ಮಾಡಿದರು.

ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋದ ಬಿಜೆಪಿ ಸಂಸದರು ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಒಂದು ದಿನವೂ ಕೂಡ ಬಾಯಿತೆರೆದಿಲ್ಲ. ಅಂತಹವರು ನಮ್ಮ ಸಂಸದರಾದರೆ ಎನು ಪ್ರಯೋಜನ? ಜನರ ಮಧ್ಯೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಸಂಸದರಾದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿದೆ. ಜನರು ಸಂಸದರ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಬಂದಾಗ ಅದನ್ನು ಪರಿಹರಿಸಿದಾಗ ಅವರ ಮುಖದಲ್ಲಿ ಕಾಣುವ ಸಂತೋಷ ಸಮಾಧಾನ ನೀಡದರೆ ನಮಗೆ ಅದಕ್ಕಿಂತ ದೊಡ್ಡ ಬಹುಮಾನ ಇನ್ನೊಂದಿಲ್ಲ ಎಂದರು.

ನಾನು ಸಂಸದನಾದರೆ ಮುಂದೆ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಪ್ರವಾಸಿ ವ್ಯವಸ್ಥೆ, ಪರಿಸರ ಸ್ನೇಹಿ ಉದ್ಯಮಗಳನ್ನು ತರುವುದರ ಮೂಲಕ ಇಲ್ಲಿನ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲಿದ್ದೇನೆ. ಮೀನುಗಾರರ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ರೂಪಿಸಬೇಕಾಗಿದೆ. ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ದಿ ಮಾಡದೇ ಇದ್ದುದರಿಂದ ನಾವು 20 ವರ್ಷ ಹಿಂದೆ ಹೋಗಿದ್ದೇವೆ ಎಂದರು.

ಹೆಗ್ಡೆ ಅವರ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರಾದ ಪ್ರಸಾದ್‌ರಾಜ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ವೆರೋನಿಕಾ ಕರ್ನೆಲಿಯೋ, ಪ್ರಖ್ಯಾತ್ ಶೆಟ್ಟಿ, ದಿನಕರ ಹೆರೂರು, ಮೈರ್ಮಾಡಿ ಸುಧಾಕರ ಶೆಟ್ಟಿ, ಭುಜಂಗ ಶೆಟ್ಟಿ, ಜಯಾನಂದ, ನಿತ್ಯಾನಂದ ಶೆಟ್ಟಿ, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಡಾ.ಸುನೀತಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!