ಅಂತಾರಾಷ್ಟ್ರೀಯ ಪ್ರಯಾಣಿಕರ ವೀಸಾ ಮತ್ತು ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಿದ ಕೇಂದ್ರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2020ರ ಫೆಬ್ರವರಿಯಿಂದೀಚೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಆಗಮನ ಮತ್ತು ನಿರ್ಗಮನ ಸಂಚಾರ ನಿರ್ಬಂಧಿಸಲು ಹಂತಹಂತವಾಗಿ ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಸಡಿಲಿಕೆ ಮಾಡಲಾಗುತ್ತಿದೆ.

ವೀಸಾ ಮತ್ತು ಪ್ರಯಾಣ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಲು ನಿರ್ಧರಿಸಿದ್ದು, ಆ ಮೂಲಕ ದೇಶಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಭಾರತೀಯರು ಮತ್ತು ವಿದೇಶಿ ಪ್ರಜೆಗಳಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಆದ್ದರಿಂದ ಭಾರತಕ್ಕೆ ಯಾವುದೇ ಉದ್ದೇಶಕ್ಕೆ ಆಗಮಿಸಲು ಬಯಸುವ ಎಲ್ಲ ವಿದೇಶಿ ಪ್ರಜೆಗಳಿಗೆ ಮತ್ತು ಒಸಿಐ ಮತ್ತು ಪಿಐಒ ಕಾರ್ಡ್ ಹೊಂದಿರುವವರಿಗೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ. 

  • ಅಧಿಕೃತ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ತಪಾಸಣಾ ಕೇಂದ್ರಗಳ ಮೂಲಕ ವಾಯು ಅಥವಾ ಜಲಮಾರ್ಗದ ಮೂಲಕ ಪ್ರವೇಶಿಸಲು ಅವಕಾಶವಿದೆ. ಆದರೆ ಪ್ರವಾಸಿ ವೀಸಾ ಹೊಂದಿರುವವರಿಗೆ ಈ ಅವಕಾಶ ಇರುವುದಿಲ್ಲ.
  • ಈ ನಿರ್ಧಾರದಡಿ, ವಂದೇ ಭಾರತ್ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಗಳು, ವಾಯುಸಾರಿಗೆ ಬಬಲ್ ವ್ಯವಸ್ಥೆ ಅಥವಾ ನಾಗರಿಕ ವಿಮಾನಯಾನ ಸಚಿವಾಲಯ ಅವಕಾಶ ನೀಡಿರುವ ಯಾವುದೇ ನಿಗದಿಯಾಗದ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. 
  • ಎಲ್ಲಾ ಪ್ರಯಾಣಿಕರು ಕ್ವಾರಂಟೈನ್ ಮತ್ತು ಇತರ ಆರೋಗ್ಯ/ಕೋವಿಡ್-19 ವಿಚಾರಗಳಿಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಕೇಂದ್ರ ಸರ್ಕಾರ ಹಂತ ಹಂತವಾಗಿ ನಿಯಮಗಳನ್ನು ಸಡಿಲಿಸಲು ನಿರ್ಧರಿಸಿರುವ ಜೊತೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಹಾಲಿ ಇರುವ ವೀಸಾಗಳು(ಎಲೆಕ್ಟ್ರಾನಿಕ್ ವೀಸಾ, ಪ್ರವಾಸಿ ವೀಸಾ ಮತ್ತು ವೈದ್ಯಕೀಯ ವೀಸಾ ಹೊರತುಪಡಿಸಿ) ಪುನರ್ ಜಾರಿಗೆ ಬರಲಿದೆ. 
  • ಒಂದು ವೇಳೆ ಅಂತಹ ವೀಸಾಗಳ ಅವಧಿ ಮುಗಿದಿದ್ದರೆ ಸಂಬಂಧಿಸಿದ ಭಾರತೀಯ ರಾಯಭಾರ ಕಚೇರಿಗಳಿಂದ ಸೂಕ್ತ ವರ್ಗದಡಿ ಹೊಸ ವೀಸಾಗಳನ್ನು ಪಡೆಯಬಹುದಾಗಿದೆ. ಯಾವುದೇ ವಿದೇಶಿಯರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡಲು ಬಯಸಿದರೆ ಅವರು ತಮ್ಮ ಪರಿಚಾರಕರು ಸೇರಿದಂತೆ ಪ್ರತ್ಯೇಕ ವೈದ್ಯಕೀಯ ವೀಸಾಗಾಗಿ ಅರ್ಜಿ ಸಲ್ಲಿಸಬಹುದು.
  • ಈ ನಿರ್ಧಾರದಿಂದಾಗಿ ವಿದೇಶಿ ಪ್ರಜೆಗಳು ವಾಣಿಜ್ಯ ಸಮಾವೇಶಗಳಲ್ಲಿ ಭಾಗವಹಿಸಲು, ಉದ್ಯೋಗ, ಅಧ್ಯಯನ, ಸಂಶೋಧನೆ, ವೈದ್ಯಕೀಯ ಉದ್ದೇಶ ಸೇರಿದಂತೆ ಇತರೆ ಉದ್ದೇಶಗಳಿಗಾಗಿ ಭಾರತಕ್ಕೆ ಬರುವುದು ಸುಲಭವಾಗಲಿದೆ.

Leave a Reply

Your email address will not be published. Required fields are marked *

error: Content is protected !!