ರೈತ ನ್ಯಾಯ್‌ನಿಂದ ದೇಶದಲ್ಲಿ ನವ ಹಸಿರು ಕ್ರಾಂತಿ ಗ್ಯಾರಂಟಿ: ರೋಯ್ಸ್ ಉದ್ಯಾವರ
ಉಡುಪಿ: ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ದೇಶದ ಜನತೆಗೆ ಕೊಡುತ್ತಿರುವ ಗ್ಯಾರಂಟಿ ಅದರಲ್ಲೂ ರೈತ ನ್ಯಾಯ್ ಕೃಷಿಕರ ಭವಿಷ್ಯ ಉಜ್ವಲ ಮಾಡುವ ಬಗ್ಗೆ ಅನುಮಾನವೇ ಇಲ್ಲ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ್ರೋಯ್ಸ್ ಉದ್ಯಾವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬಿಜೆಪಿ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ದಶಕದಿಂದ ಹೇಳುತ್ತಾ ಮೋಸ ಮಾಡಿದೆ. ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸಂಸದೆ ಸ್ಥಾನದಿಂದಲೂ ವೈಫಲ್ಯ ಹೊಂದಿ ಸ್ವಕ್ಷೇತ್ರದಲ್ಲೇ ಗೊಬ್ಯಾಕ್ ಆಗಬೇಕಾದರೆ ಜನರ ಹಾಗೂ ರೈತರ ಬಗ್ಗೆ ಕನಿಷ್ಟ ಜ್ಞಾನ ಹೊಂದಿರದ ರಾಜಕಾರಣಿ ಎಂದು ತಿಳಿಯುತ್ತದೆ.
ಬಿಜೆಪಿಯಲ್ಲಿನ ಪ್ರತಿಯೊಬ್ಬ ಸಚಿವರೂ ದೇಶದ ಅಭಿವೃದ್ಧಿಯ ಪ್ರಬುದ್ಧತೆ ಹೊಂದದೇ ಇರುವುದು ಭಾರತ ದೇಶದ ಸಾಲ 200 ಲಕ್ಷ ಕೋಟಿ ದಾಟಲು ಕಾರಣ ಎಂದು ತಿಳಿಸಿದರು.
ರೈತ ನ್ಯಾಯ್ ನಿಂದ ಕನಿಷ್ಠ ಬೆಂಬಲ ಬೆಲೆಯನ್ನು ಸ್ವಾಮಿನಾಥನ್ ಆಯೋಗದ ಪ್ರಕಾರ ಕಾನೂನು ಸ್ಥಾನಮಾನ ನೀಡಲಿದ್ದು, ಕೃಷಿ ಸಾಲ ಮನ್ನಾ ಗ್ಯಾರಂಟಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಾಶ್ವತ ಆಯೋಗ ರಚನೆ, ಬೆಳೆ ನಷ್ಟವಾದ 30 ದಿನಗಳಲ್ಲಿ ಬ್ಯಾಂಕ್ ಖಾತೆಗೆ ನೇರ ವಿಮೆ ಖಾತ್ರಿ ಹಾಗೂ ರೈತರೊಡನೆ ಸಮಲೋಚಿಸಿ ನೂತನ ಸ್ಠಿರ ಆಮದು ರಫ್ತು ನೀತಿ ರಚಿಸಲಿದ್ದು, ಜಿಎಸ್ ಟಿ ಮುಕ್ತ ಕೃಷಿ ಕ್ಷೇತ್ರವನ್ನು ರಚಿಸುವುದು ಕಾಂಗ್ರೆಸ್ ಗುರಿಯಾಗಿದೆ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಿಂದ ರೈತಾಪಿ ವರ್ಗವು ತಮ್ಮ ಹಕ್ಕುಗಳ ಬಗ್ಗೆ ಪ್ರತಿಭಟನೆ ಹಾಗೂ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಪ್ರತಿಭಟನೆಗಳಿಗೆ ಅವಕಾಶ ನೀಡದೇ ಅವಮಾನಿಸುತ್ತಿದೆ. ರಾಜ್ಯದಲ್ಲಿ ಮಹದಾಯಿ ಹೋರಾಟ ಮಾಡುತ್ತಿರುವ ರೈತರು ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಸಮಸ್ಯೆಗಳನ್ಮು ಬಗೆಹರಿಸಲಾಗುವುದೆಂದರು. ರಾಜ್ಯದಲ್ಲಿ ತೆಂಗು ಬೆಳೆಗಾರರಿಗೂ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಗಮನಹರಿಸಲಾಗುವುದೆಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ನೂರು ಪ್ರತಿಶತ ಜಾರಿಗೊಳಿಸಿದ ಕಾರಣ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರೈತ ನ್ಯಾಯ ಗ್ಯಾರಂಟಿಯನ್ಮು ರೈತಾಪಿ ವರ್ಗದ ಮತದಾರರು ಬೆಂಬಲಿಸುವ ವಿಶ್ವಾಸ ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ವ್ಯಕ್ತಪಡಿಸಿದ್ದಾರೆ.