ಚುನಾವಣೆಗೆ ಮುನ್ನ ಗ್ಯಾರಂಟಿ ಘೋಷಿಸುವಾಗ ʼನನ್ನ ತೆರಿಗೆ ನನ್ನ ಹಕ್ಕುʼ ನೆನಪಿರಲಿಲ್ಲವೇ?: ನಿರ್ಮಲಾ
ಬೆಂಗಳೂರು : ʼನನ್ನ ತೆರಿಗೆ ನನ್ನ ಹಕ್ಕುʼ ಘೋಷಣೆ ಸರಿ ಇದೆ. ಎಲ್ಲ ಬೆಂಗಳೂರಿಗರು ಇದೇ ಪ್ರಶ್ನೆ ಕೇಳುತ್ತಾರೆಯೇ? ಚುನಾವಣೆಗೆ ಮುನ್ನ ಗ್ಯಾರಂಟಿ ಘೋಷಿಸುವ ಮುನ್ನ ಈ ಮಾತು ನೆನಪಿರಲಿಲ್ಲವೇ? ಕೊಟ್ಟಿರುವ ಆಶ್ವಾಸನೆ ಪೂರ್ಣಗೊಳಿಸಲು ಹಣ ಎಲ್ಲಿಂದ ತರುತ್ತಾರೆ? ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು ಗ್ಯಾರಂಟಿಗಳಿಗೆ ಹಣ ಬಳಕೆಯಾಗುತ್ತಿರುವುದರಿಂದ ಅಭಿವೃದ್ದಿ ಕೆಲಸಗಳಿಗೆ ಹಣ ಕೊರತೆಯಿದೆ ಎಂದು ಹೇಳಿದ್ದರು. ಕರ್ನಾಟಕದ ಕಲ್ಯಾಣಕ್ಕೆ ಏನು ಮಾಡುತ್ತೀರಿ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದಂತೆ, ಕಳೆದ ಚುನಾವಣೆಯಲ್ಲಿ ಹಿಮಾಚಲದಲ್ಲೂ ಬದಲಾವಣೆಯಾಯಿತು. ಚುನಾವಣೆಗೆ ಮುಂಚೆ ನಾವು ಎನ್ ಪಿ ಎಸ್ ವಿರೋಧಿಸುತ್ತೇವೆ. ಅಧಿಕಾರಕ್ಕೆ ಬಂದರೆ ಒಪಿಎಸ್ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು. ರಾಜಸ್ಥಾನದಲ್ಲೂ ಚುನಾವಣೆಗೆ ಮುಂಚೆ ಅಶೋಕ್ ಗೆಹ್ಲೋಟ್, ನಾವು ಎನ್ ಪಿ ಎಸ್ ನಲ್ಲಿ ಕೊಟ್ಟಿರುವ ಹಣ ವಾಪಸ್ ಕೊಡಿ, ಒಪಿಎಸ್ ಜಾರಿಗೊಳಿಸಿಯೇ ಸಿದ್ಧ ಎಂದಿದ್ದರು. ಹಿಮಾಚಲದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಬಂತು. ಈಗ ಎಲ್ಲಿದೆ ಒಪಿಎಸ್? ಜಾರಿಗೆಯಾಯಿತೇ? ಏಕೆ ಈ ಬಗ್ಗೆ ಈಗ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
“ತೆರಿಗೆಯ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಿಮಗೆ ಆಹ್ವಾನವಿದೆಯಲ್ಲಾ?” ಎಂಬ ಪ್ರಶ್ನೆಗೆ ಉತ್ತರಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿರಾಕರಿಸಿದರು.