ಜನರಲ್ಲಿ ಹಾವುಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹೋಗಬೇಕಾಗಿದೆ- ಗುರುರಾಜ್ ಸನಿಲ್
ಉಡುಪಿ: ಜನರಲ್ಲಿ ನಮ್ಮ ಸುತ್ತ ಇರುವ ಸರಿಸೃಪಗಳು ಅದರಲ್ಲೂ ಹಾವುಗಳ ಬಗ್ಗೆ ತುಂಬಾ ತಪ್ಪು ಕಲ್ಪನೆಗಳಿವೆ. ಎಲ್ಲಾ ಹಾವುಗಳು ವಿಷಕಾರಿಗಳು ಅಲ್ಲ. ವಿಷಕಾರಿ ಹಾವುಗಳು ಕೂಡ ನಮ್ಮಿಂದ ನೋವಿಗೊಳಗಾಗದೆ ನಮಗೆ ಹಾನಿ ಮಾಡುವುದಿಲ್ಲ. ಹಾವುಗಳು ಮುಗ್ಧ ಜೀವಿಗಳು. ಅವುಗಳ ವಿಷಯದಲ್ಲಿ ಬರುವ ಸಂಗತಿಗಳನ್ನು ಯಾವುದೇ ಪ್ರಶ್ನೆ ಮಾಡದೇ ಒಪ್ಪಿಕೊಂಡರೆ ಅದೇ ದೊಡ್ಡ ಮೂಡನಂಬಿಕೆಯಾಗುತ್ತದೆ. ಈ ಮೂಢನಂಬಿಕೆಯಿಂದ ನಾವು ಜೀವನದಲ್ಲಿ ನಾನಾ ತೊಂದರೆಗೆ ಒಳಗಾಗುತ್ತಿದ್ದೇವೆ. ಹಾಗಾಗಿ ನಾವು ಮೊದಲು ನಮ್ಮ ಮನಸ್ಸಲ್ಲಿ ಮನೆ ಮಾಡಿದ ಹಾವುಗಳನ್ನು ದೂರ ಇರಿಸಿ ನಮ್ಮ ಸುತ್ತಮುತ್ತ ಇರುವ ನಿಜ ಹಾವಿನ ಬಗ್ಗೆ ತಿಳಿದುಕೊಂಡು ಅವುಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳ ಬೇಕು ಎಂದು ಖ್ಯಾತ ಉರಗತಜ್ಞ ಗುರುರಾಜ್ ಸನಿಲ್ ರವರು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸುವರ್ಣ ಸಂಭ್ರಮ ವರ್ಷದ ಮಾರ್ಚ್ ತಿಂಗಳದ ಕಾರ್ಯಕ್ರಮವಾಗಿ ಹಮ್ಮಿಕೊಂಡ ಹಾವು ನಾವು ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನುಡಿದರು.
ಅವರು ಮುಂದುವರೆಯುತ್ತಾ ನಮ್ಮ ಮನೆ ಸುತ್ತ ಹಾವುಗಳು ಹರಿದಾಡಿದರೆ ಅದರಿಂದ ಆತಂಕಿತರಾಗಿ ಅದು ಏಕೆ ಹರಿದಾಡುತ್ತದೆ ಎಂದು ಪ್ರಶ್ನೆ ಇಡುವುದಲ್ಲ. ಆಗ ಅವರು ನಮ್ಮನ್ನು ದಾರಿ ತಪ್ಪಿಸುತ್ತಾರೆ .ಹಾವು ನಮ್ಮ ಮನೆ ಸುತ್ತ ಹರಿದಾಡುತ್ತಿದೆ ಎಂದರೆ ಮುಖ್ಯವಾಗಿ ಹಾವಿಗೆ ಹಸಿವೆಯಾಗಿದೆ ಎಂದು ಅರ್ಥ. ಮನೆಯ ಸುತ್ತಮುತ್ತ ಇರುವ ಇಲಿ, ಕೋಳಿಗಳನ್ನು ಹಾವುಗಳು ಬೇಟೆಯಾಡುವುದಕ್ಕೆ ನಮ್ಮ ಮನೆಯ ಸುತ್ತ ಬರುತ್ತದೆ ಎಂಬುದನ್ನ ನಾವು ತಿಳಿದುಕೊಳ್ಳ ಬೇಕು. ಹಾವುಗಳು ತಮ್ಮ ಆಹಾರಕ್ಕೆ ಒಮ್ಮೆ ಗುರಿ ಇಟ್ಟರೆ ಅದನ್ನು ಪಡೆಯುವ ತನಕ ಬಿಡುವುದಿಲ್ಲ. ಹಾಗಾಗಿ ಮನೆಯ ಸುತ್ತ ಹಾವು ಸುತ್ತುವುದಕ್ಕೆ ಬೇರೆ ಕಾರಣಗಳು ಯಾವುದು ಇಲ್ಲ. ಪ್ರಕೃತಿಯಲ್ಲಿ ಇರುವ ಬೇರೆ ಜೀವ ಜಂತುಗಳ ಬಗ್ಗೆ ತಿಳಿದುಕೊಳ್ಳದೆ ಹೆದರಿ ಅವುಗಳನ್ನು ಅವುಗಳನ್ನು ಕೊಲ್ಲುವುದರಿಂದ ಪ್ರಕೃತಿ ನಾಶವಾಗುತ್ತದೆ.
ಕೆಲವು ಬಗೆಯ ಹಾವುಗಳು ಕೋಟಿ ರೂಪಾಯಿಗೆ ಬೆಲೆ ಬಾಳುತ್ತದೆ ಎನ್ನುವ ತಪ್ಪು ಕಲ್ಪನೆಗಳಿವೆ .ಅಂತ ಯಾವುದೇ ಹಾವುಗಳಿಲ್ಲ .ಹೆಬ್ಬಾವುಗಳು ಮನುಷ್ಯರನ್ನು ನುಂಗುತ್ತೆ ಎಂಬ ಕಲ್ಪನೆಗಳಿವೆ. ಆದರೆ ಭಾರತದ ಯಾವುದೇ ಹೆಬ್ಬಾವು ಮನುಷ್ಯನನ್ನು ನುಂಗಿದ ದಾಖಲೆಗಳು ಇಲ್ಲ. ಆಫ್ರಿಕದ ಗ್ರಾಫ್ ಪೈಥಾನ್ ಗಳು ಮನುಷ್ಯರನ್ನು ನುಂಗುತ್ತವೆ. ನಾವು ನಮ್ಮ ನೆರೆಯ ಹಾಡಿಗಳನ್ನು ನಾಶ ಮಾಡುತ್ತಿರುವುದರಿಂದ ಅಲ್ಲಿನ ಹೆಬ್ಬಾವುಗಳು ನಮ್ಮ ವಠಾರಕ್ಕೆ ಬರುತ್ತದೆ. ನಮ್ಮ ವಠಾರದಲ್ಲಿ ನಾಯಿ, ಬೆಕ್ಕು ಕೋಳಿಗಳು ಹೆಚ್ಚಾಗಿ ಸಾಕಿದರೆ ಹೆಬ್ಬಾವು ಬರುತ್ತದೆ. ಅದು ತಮಗೆ ಬೇಕಾದನ್ನು ತಿಂದು ಜಾಗ ಖಾಲಿ ಮಾಡುತ್ತದೆ.
ನಮ್ಮ ವಠಾರದಲ್ಲಿರುವ ನಾಯಿ,ಬೆಕ್ಕುಗಳು ಕ್ರಿಮಿ ಕೀಟಗಳನ್ನು ನಾಶಪಡಿಸುವುದರ ಮೂಲಕ ಪ್ರಕೃತಿ ಅಸಮತೋಲನಕ್ಕೆ ಒಳಗಾಗುತ್ತದೆ. ಆಗ ಪ್ರಕೃತಿಯೇ ಹೆಬ್ಬಾವುಗಳನ್ನ ಪ್ರಚೋದಿಸಿ ಪ್ರಕೃತಿಯನ್ನು ಸಮತೋಲನ ಮಾಡಿಕೊಳ್ಳುತ್ತದೆ.
ವಿಷಕಾರಿ ಹಾವುಗಳು ಕಚ್ಚಿದರೆ ಭಯಪಡಬೇಕಾಗಿಲ್ಲ ಪ್ರಥಮ ಚಿಕಿತ್ಸೆಯನ್ನು ಮಾಡಿ ನಂತರ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬಹುದು ನಾವು ಆಸ್ಪತ್ರೆಗೆ ಹೋಗುವುದು ವಿಳಂಬವಾದರೆ ಮಾತ್ರ ಸಾವು ಸಂಭವಿಸುತ್ತದೆ, ಮತ್ಯಾವುದೇ ಕಾರಣದಿಂದಲ್ಲ.
ವಿಷಕಾರಿ ಹಾವುಗಳ ಆರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆ. ಇದರಿಂದ ಅಂತರ್ಜಲ ಮಟ್ಟ ಸಮತೋಲನ ಕೊಳ್ಳುತ್ತದೆ ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಇವತ್ತು ನಾವು ನಾಗಬನಗಳನ್ನ ಜೀರ್ಣೋದ್ಧಾರ ಮಾಡಿ ಅಲ್ಲಿ ಹಾವುಗಳಿಗೂ ಮರಮಟ್ಟುಗಳಿಗೂ ಜಾಗವಿಲ್ಲದಂತೆ ಮಾಡಿದ್ದೇವೆ. ಇದರಿಂದ ಪ್ರಕೃತಿ ನಾಶವಾಗುತ್ತಾ ಇರುವುದು ಈ ಕಾಲದ ದುರಂತ ಎಂದರು. ನಂತರ ಸಂವಾದ ಕಾರ್ಯಕ್ರಮ ಜರಗಿತು ಸುಮಾರು ಎರಡು ಕಾಲು ಗಂಟೆಗಳ ದೀರ್ಘಕಾಲದ ಜರಗಿದ ಈ ಕಾರ್ಯಕ್ರಮದಲ್ಲಿ ಸಭಿಕರು ಆಸಕ್ತಿಯಿಂದ ಭಾಗವಹಿಸಿದರು
ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ತಿಲಕ್ ರಾಜ್ ಸಾಲಿಯಾನ್ ಅವರು ಸ್ವಾಗತಿಸಿ,ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತಾಡಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಅಲಿ ಕಾರ್ಯಕ್ರಮವನ್ನು ನಿರ್ವಹಿಸಿ ಧನ್ಯವಾದಗಳನಿತ್ತರು.