ಉಡುಪಿ: ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣ- ತ್ವರಿತ ವಿಚಾರಣೆಗೆ ಸಹಕರಿಸಲು ನ್ಯಾಯಾಲಯ ಸೂಚನೆ
ಉಡುಪಿ : ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ತ್ವರಿತ ವಿಚಾರಣೆಗೆ ಸಹಕರಿಸುವಂತೆ ವಿಶೇಷ ಸರಕಾರಿ ಅಭಿಯೋಜಕರು ಹಾಗೂ ಆರೋಪಿ ಪರ ವಕೀಲರಿಗೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಚಾರಣೆಗೆ ಪೂರ್ವಭಾವಿಯಾಗಿ ಶುಕ್ರವಾರ ನಡೆದ ಪ್ರಿ ಟ್ರಾಯಲ್ ಕಾನ್ಫರೆನ್ಸ್‌ನಲ್ಲಿ ಸೂಚನೆ ನೀಡಿತು.
ಜಿಲ್ಲಾ ನ್ಯಾಯಾಧೀಶ ದಿನೇಶ್ ಹೆಗ್ಡೆ ನಡೆಸಿದ ಈ ಕಾನ್ಫರೆನ್ಸ್‌ನಲ್ಲಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ, ಪ್ರಕರಣದ ತನಿಖಾಧಿಕಾರಿಯಾಗಿ ದ್ದ ಆಗಿನ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಗೌಡ, ಆರೋಪಿ ಪರ ವಕೀಲರು ಹಾಜರಿದ್ದರು. ಬೆಂಗಳೂರಿನ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಾಯಿತು.
ಪ್ರಕರಣದಲ್ಲಿ ನಡೆಸಬೇಕಾದ ವಿಚಾರಣೆ, ಒಪ್ಪಿಗೆಯೊಂ ದಿಗೆ ಗುರುತಿಸಬೇಕಾದ ದಾಖಲೆಗಳು ಮತ್ತು ಈ ಪ್ರಕರಣದಲ್ಲಿ ಪರೀಕ್ಷಿಸಬೇಕಾದ ಸಾಕ್ಷಿಗಳ ಬಗ್ಗೆ ಚರ್ಚೆಗಳು ನಡೆದವು. ಮುಂದಿನ ವಿಚಾರಣೆಯ ದಿನಾಂಕದಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆಗೆ ಒಳಪಡುವ ಸಾಕ್ಷಿಗಳ ಹೆಸರನ್ನು ನಮೂದಿಸುವ ಜ್ಞಾಪನಪತ್ರ (ಮೆಮೊ)ವನ್ನು ಸಲ್ಲಿಸಬೇಕು. ಅದರಂತೆ ನ್ಯಾಯಾಲಯವು ಸಾಕ್ಷಿಗಳಿಗೆ ಸಮನ್ಸ್ ನೀಡಲು ಅನುವು ಮಾಡಿಕೊಡುತ್ತದೆ ಎಂದು ನ್ಯಾಯಾಧೀಶರು ತಿಳಿಸಿದರು.
ಆರೋಪಿ ನ್ಯಾಯಾಂಗ ಬಂಧನದಲ್ಲಿರುವುದರಿಂದ ವಿಚಾರಣೆಯನ್ನು ಯಾವುದೇ ರೀತಿಯಲ್ಲೂ ಮುಂದೂಡದಂತೆ ತ್ವರಿತವಾಗಿ ನಡೆಸಲು ಸಹಕರಿಸುವಂತೆ ನ್ಯಾಯಾಧೀಶಕರು ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಆರೋಪಿ ಪರ ವಕೀಲರಿಗೆ ಸೂಚನೆ ನೀಡಿದರು. ಮುಂದಿನ ದಿನಾಂಕವನ್ನು ಎ.10 ಕ್ಕೆ ನಿಗದಿ ಪಡಿಸಿ ನ್ಯಾಯಾಧೀಶರು ಆದೇಶ ನೀಡಿದರು. ಆ ದಿನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್, ಮುಂದಿನ ಮೂರು ದಿನಗಳ ಕಾಲ ವಿಚಾರಣೆಗೆ ಕರೆಯ ಬೇಕಾದ ಸಾಕ್ಷಿಗಳ ಕುರಿತು ಜ್ಞಾಪನಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಅದರಂತೆ ನ್ಯಾಯಾಲಯ ಸಾಕ್ಷಿಗಳಿಗೆ ವಿಚಾರಣೆಗೆ ಹಾಜರಾಗು ವಂತೆ ಸಮನ್ಸ್ ಜಾರಿ ಮಾಡುತ್ತದೆ. ಅಂದಿನಿಂದ ಪ್ರಕರಣದ ವಿಚಾರಣೆ ಆರಂಭಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಪ್ರಮುಖ ಸಾಕ್ಷಿಗಳು, ಮಹಜರು ಸಾಕ್ಷಿಗಳ ಸೇರಿದಂತೆ ವಿವಿಧ ಸಾಕ್ಷಿಗಳ ವರ್ಗಾವಾರು ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ ವಿಶೇಷ ಪಬ್ಲಿಕ್ ಪ್ರಾಸಿ ಕ್ಯೂಟರ್ ಜ್ಞಾಪನಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.