ಎಮ್.ಸಿ.ಸಿ. ಬ್ಯಾಂಕ್: 13.12 ಕೋಟಿ ಲಾಭ- ಕಾವೂರು, ಬೆಳ್ತಂಗಡಿ ಮತ್ತು ಶಿವಮೊಗ್ಗದಲ್ಲಿ ಹೊಸ ಶಾಖೆಗಳು

ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 112 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2024 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಲೆಕ್ಕ ಪರಿಶೋಧನಾ ಪೂರ್ವ 13.12 ಕೋಟಿ ರೂ. ವ್ಯವಹಾರಿಕ ಲಾಭಗಳಿಕೆಯನ್ನು ದಾಖಲಿಸಿದೆಂದು‌ ಬ್ಯಾಂಕಿನ‌ ಅಧ್ಯಕ್ಷರಾದ ಅನಿಲ್ ಲೋಬೊ ಮಾಹಿತಿ ನೀಡಿದ್ದಾರೆ.

ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ 1.07% ಎನ್.ಪಿ.ಎ. ದಾಖಲಿಸಿದೆ. ದಾಖಲೆಯ ಲಾಭ ಮತ್ತು ಕನಿಷ್ಠ ಎನ್.ಪಿ.ಎ. ಜೊತೆಗೆ, 2023–2024ನೇ ವಿತ್ತೀಯ ವರ್ಷದಲ್ಲಿ, ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ, ಬ್ಯಾಂಕ್ ಸ್ಥಾಪನೆಯಾದಂದಿನಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯ ಕ್ಷೇತ್ರವನ್ನು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಹೀಗೆ 5 ಜಿಲ್ಲೆಗಳಿಗೆ ವಿಸ್ತರಿಸಿದ್ದು, ಪ್ರಸ್ತುತ ವರ್ಷ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅನುಮತಿ ದೊರಕಿದ್ದು, ಇದೊಂದು ಮಹತ್ವದ ಸಾಧನೆಯಾಗಿರುತ್ತದೆ‌ ಎಂದರು.

ಈಗಾಗಲೇ ಬ್ರಹ್ಮಾವರದಲ್ಲಿ ಬ್ಯಾಂಕಿನ 17ನೇ ಶಾಖೆಯನ್ನು ತೆರೆದಿದ್ದು, ಕಾವೂರು, ಬೆಳ್ತಂಗಡಿ ಮತ್ತು ಶಿವಮೊಗ್ಗದಲ್ಲಿ ಶೀಘ್ರದಲ್ಲೇ ಶಾಖೆಗಳನ್ನು ತೆರೆಯಲಾಗುವುದು. ಅನಿವಾಸಿ ಭಾರತೀಯರರಿಗೆ (ಎನ್‌ಆರ್‌ಐ) ಸೇವಾ ಸೌಲಭ್ಯವನ್ನು ನೀಡುವ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ ಎರಡನೇ ಬ್ಯಾಂಕ್ ಆಗಿರುತ್ತದೆ. ಇಡೀ ಕರ್ನಾಟಕದಲ್ಲಿ ಹಂತ ಹಂತಗಳಲ್ಲಿ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು‌ ಹೇಳಿದರು.

ಬ್ಯಾಂಕಿನ ವ್ಯವಹಾರವು ಡಿಸೆಂಬರ್ ಅಂತ್ಯಕ್ಕೆ ರೂ. 1000 ಕೋಟಿ ತಲುಪಿದ್ದು, ಈ ಆರ್ಥಿಕ ವರ್ಷದ ಇನ್ನೊಂದು ಮಹತ್ವದ ಸಾಧನೆಯಾಗಿರುತ್ತದೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಅನಿಲ್ ಲೋಬೊ ನೇತ್ರತ್ವದ 14 ಸದಸ್ಯರು 2023-28 ವರ್ಷಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ದಿನಾಂಕ 28, ಅಗೊಸ್ತ್ 2023ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅನಿಲ್ ಲೋಬೊ ಅವರು ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಬ್ಯಾಂಕಿನ ಸದಸ್ಯರು ಬ್ಯಾಂಕಿನ ಮೇಲೆ ಹೊಂದಿರುವ ವಿಶ್ವಾಸವೇ ಇದಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 17 ಶಾಖೆಗಳನ್ನು ಹೊಂದಿರುವ ಎಮ್.ಸಿ.ಸಿ. ಬ್ಯಾಂಕ್ 2023–24 ವಿತ್ತೀಯ ವರ್ಷದಲ್ಲಿ ದಾಖಲೆಯ ರೂ. 13.12 ಕೋಟಿ ವ್ಯವಹಾರಿಕ ಲಾಭವನ್ನು ಗಳಿಸಿದೆ. 2023–24 ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ ರೂ. 62.45 ಕೋಟಿಯಿಂದ ರೂ.76.35 ಕೋಟಿಗೆ ತಲುಪಿದೆ. ಬ್ಯಾಂಕಿನ ವ್ಯವಹಾರ ರೂ. 1081 ಕೋಟಿ ದಾಟಿದ್ದು ಕಳೆದ ವರ್ಷಕ್ಕಿಂತ ಶೇಕಡಾ 16 ಏರಿಕೆಯಾಗಿದೆ.
ಬ್ಯಾಂಕಿನ ಸದಸ್ಯರು ಬ್ಯಾಂಕಿನ ಪ್ರಸಕ್ತ ಆಡಳಿತ ಮಂಡಳಿಗೆ ನೀಡಿದ ಬೆಂಬಲ, ಗ್ರಾಹಕರ ವಿಶ್ವಾಸ ಮತ್ತು ಅಧಿಕಾರಿವರ್ಗ ಹಾಗೂ ಸಿಬ್ಬಂದಿಯ ಶ್ರಮದಿಂದ ಇದು ಸಾಧ್ಯವಾಗಿದೆ. ಜೊತೆಗೆ ಸಾಕಷ್ಟು ಅನಿವಾಸಿ ಭಾರತೀಯರು ಬ್ಯಾಂಕಿನಲ್ಲಿ ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಿರುತ್ತಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರು ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರ್ಯೂ ಡಿಸೊಜಾ, ಡಾ| ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೊಜಾ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೆರೊ, ರೋಶನ್ ಡಿಸೊಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೊಜಾ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿ ಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂದಕರು – ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

1 thought on “ಎಮ್.ಸಿ.ಸಿ. ಬ್ಯಾಂಕ್: 13.12 ಕೋಟಿ ಲಾಭ- ಕಾವೂರು, ಬೆಳ್ತಂಗಡಿ ಮತ್ತು ಶಿವಮೊಗ್ಗದಲ್ಲಿ ಹೊಸ ಶಾಖೆಗಳು

Leave a Reply

Your email address will not be published. Required fields are marked *

error: Content is protected !!