ಲೋಕಸಭಾ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಶುಕ್ರವಾರ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಐದು ನ್ಯಾಯ ಸ್ತಂಭಗಳತ್ತ ತನ್ನ ಗಮನ ಕೇಂದ್ರೀಕರಿಸಿದೆ. ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಜಾತಿ ಗಣತಿ, ಉದ್ಯೋಗಾವಕಾಶ ಹಾಗೂ ಮಹಿಳೆಯರಿಗೆ ನಗದು ವರ್ಗಾವಣೆಯ ಭರವಸೆಯನ್ನೂ ನೀಡಿದೆ.
ಕಾಂಗ್ರೆಸ್ ಪಕ್ಷದ ಪಂಚ ನ್ಯಾಯ ಅಥವಾ ನ್ಯಾಯದ ಸ್ತಂಭಗಳ ಭರವಸೆಯು ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ ನ್ಯಾಯ ಹಾಗೂ ಸಹಭಾಗಿತ್ವ ನ್ಯಾಯವನ್ನು ಒಳಗೊಂಡಿದೆ.
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ದೇಶವ್ಯಾಪಿ ಜಾತಿ ಗಣತಿ ನಡೆಸುವ ಆಶ್ವಾಸನೆ ನೀಡಿದೆ. ಇದರಿಂದ ಜಾತಿಗಳು ಹಾಗೂ ಉಪಜಾತಿಗಳ ಸಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಿದೆ. ಈ ದತ್ತಾಂಶಗಳನ್ನು ಆಧರಿಸಿ ದೃಢ ನಿರ್ಧಾರ ಕೈಗೊಳ್ಳಲು ಕಾರ್ಯಸೂಚಿಯೊಂದನ್ನು ಬಲಿಷ್ಠಗೊಳಿಸಲಾಗುವುದು ಎಂದೂ ಕಾಂಗ್ರೆಸ್ ಹೇಳಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗಿರುವ ಶೇ.50ರ ಮೀಸಲಾತಿ ಯನ್ನು ಏರಿಕೆ ಮಾಡಲು ಸಾಂವಿಧಾನಿಕ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಿದೆ.
ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ನೀಡಲಾಗಿರುವ ಶೇ. 10ರಷ್ಟು ಮೀಸಲಾತಿಯನ್ನು ಯಾವುದೇ ತಾರತಮ್ಯವಿಲ್ಲದೆ, ಎಲ್ಲ ಜಾತಿ, ಜನಾಂಗಗಳ ದುರ್ಬಲರಿಗೂ ಹಂಚಲಾಗುವುದು ಎಂದು ಆಶ್ವಾಸನೆ ನೀಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಹುದ್ದೆಗಳಲ್ಲಿನ ಬ್ಯಾಕ್ ಲಾಗ್ ಹುದ್ದೆಗಳನ್ನು ಒಂದು ವರ್ಷದ ಅವಧಿಯೊಳಗೆ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದೆ.
ಸರಕಾರಿ ಹಾಗೂ ಸಾರ್ವಜನಿಕ ಉದ್ಯಮಗಳಲ್ಲಿನ ನಿಯಮಿತ ಉದ್ಯೋಗಗಳಿಗೆ ಗುತ್ತಿಗೆ ಆಧಾರದ ನೇಮಕಾತಿಯನ್ನು ನಿಷೇಧಿಸಲಾಗುವುದು ಹಾಗೂ ಅಂತಹ ಉದ್ಯೋಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಖಾಯಂಗೊಳಿಸಲಾಗುವುದು ಎಂದು ಭರವಸೆ ನೀಡಲಾಗಿದೆ.
istu varshadalli yake kottila?