ರೈತರ ಬಾಳು ಹಸನಾಗಲು ಮತ್ತೊಮ್ಮೆ ಮೋದಿ ಸರ್ಕಾರದ ಅಗತ್ಯವಿದೆ- ಎ.ಎಸ್ ಪಾಟೀಲ್
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲದಿಂದಾಗಿ ರೈತರು ಸ್ವಾಭಿಮಾನ ಮತ್ತು ಸದೃಢ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಎ ಎಸ್ ಪಾಟೀಲ್ ನಡಹಳ್ಳಿ ಪತ್ರಿಕಾಗೋಷ್ಠಿಯಲ್ಲಿ
ಉಡುಪಿ ಜಿಲ್ಲಾ ಬಿಜೆಪಿಯ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಮೂಲಕ 12 ಕೋಟಿಗೂ ಅಧಿಕ ರೈತ ಕುಟುಂಬಗಳಿಗೆ ವಾರ್ಷಿಕ ₹6000 ಆರ್ಥಿಕ ನೆರವಿನ ಮೂಲಕ 3 ಲಕ್ಷ ಕೋಟಿ ನೀಡಲಾಗಿದೆ, ಹಾಗೂ ರಾಜ್ಯದ 53 ಲಕ್ಷ ರೈತರಿಗೆ ಕೇಂದ್ರ ದಿಂದ ಸುಮಾರು 4900 ಕೋಟಿ ನೀಡಲಾಗಿದೆ ಎಂದರು.
2023-24ರಲ್ಲಿ ಮೋದಿ ಸರ್ಕಾರ ಬಂದ ಮೇಲೆ ಕೃಷಿ ಕ್ಷೇತ್ರಕ್ಕೆ ಬಜೆಟನಲ್ಲಿ ಹಂಚಿಕೆಯಾದ ಅನುದಾನ ಸರಿಸುಮಾರು 5 ಪಟ್ಟು ಹೆಚ್ಚಳ ಅಂದರೆ 125036 ಕೋಟಿ ರೂಪಾಯಿ ಹೆಚ್ಚಳವಾಗಿದೆ.ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಅಡಿಯಲ್ಲಿ 48 ಕೋಟಿ ರೈತ ಕುಟುಂಬಗಳಿಗೆ 1.5 ಲಕ್ಷ ಕೋಟಿ ರೂ. ಪಾವತಿ ಮಾಡಲಾಗಿದೆಂದು ವಿವರಿಸಿದರು.
ರೈತರಿಗೆ ₹3500 ಬೆಲೆಯ ರಸ ಗೊಬ್ಬರಗಳನ್ನು ಸರಬರಾಜು ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ, ರಾಷ್ಟ್ರೀಯ ಗೋಕುಲ್ ಮಿಷನ್, ಕನಿಷ್ಠ ಬೆಂಬಲ ಬೆಲೆ, ಕಿಸಾನ್ ಕ್ರೆಡಿಟ್ ಕಾರ್ಡ್, ರೈತ ಉತ್ಪಾದಕ ಸಂಸ್ಥೆ ಮುಂತಾದ ಅನೇಕ ರೈತ ಪರ ಯೋಜನೆಗಳ ಮೂಲಕ ರೈತರ ಮನೆ ಬಾಗಿಲಿಗೆ ಸವಲತ್ತುಗಳನ್ನು ನೀಡಲಾಗಿದೆ.
ಆದರೆ ಕಾಂಗ್ರೆಸ್ಸಿನ ರಾಜ್ಯ ಸರ್ಕಾರ ರೈತಪರ ಯೋಜನೆಯನ್ನು ಕೈಬಿಟ್ಟಿದೆ. ರೈತರಿಗೆ ಪ್ರತಿ ವರ್ಷ 4000 ರೂ. ಕೊಡುವ ಸಹಾಯಧನ ಯೋಜನೆಯನ್ನು ಕೈ ಬಿಟ್ಟಿದೆ. 11 ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿವರ್ಷ 439 ಕೋಟಿ ರೂಪಾಯಿ ನೆರವು ನೀಡಲು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆಯನ್ನು ಕೈಬಿಟ್ಟಿದೆ ಎಂದು ದೂರಿದರು.
ರಾಜ್ಯದ 50 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ 10 ಸಾವಿರ ರೂ. ಹೆಚ್ಚುವರಿ ಸಹಾಯಧನ ನೀಡುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ರೈತ ಶಕ್ತಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ .ಭೂ ರೈತ ಮಹಿಳಾ ಕೃಷಿ ಕಾರ್ಮಿಕರಿಗೆ ಡಿಬಿಟಿ ಮೂಲಕ ಮಾಸಿಕ 500 ಸಹಾಯಧನ ನೀಡುವ ಬಿಜೆಪಿ ಸರ್ಕಾರದ ಶ್ರಮಶಕ್ತಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ.
ಕಳೆದ ಒಂದು ವರ್ಷದಿಂದ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಎಂದು ಹೇಳಿದರು. ಇನ್ನು ಮುಂದೆಯೂ ಕೂಡ ರೈತರ ಬಾಳು ಹಸನಾಗಲು ಮತ್ತೊಮ್ಮೆ ಮೋದಿ ಸರ್ಕಾರದ ಅಗತ್ಯವಿದೆ, ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಸಂಸದರು ಆಯ್ಕೆಯಾಗುವುದು ಶತಸಿದ್ಧ ಎಂದು ಎ ಎಸ್ ಪಾಟೀಲ್ ನಡಹಳ್ಳಿ ಹೇಳಿದರು .
ಈ ಸಂದರ್ಭದಲ್ಲಿ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಕಾಪು ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ , ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮುರುಡಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಕಾರ್ಯದರ್ಶಿಗಳಾದ ಪುಷ್ಪರಾಜ ಶೆಟ್ಟಿ, ಶ್ರೀಕಾಂತ ಕಾಮತ್, ವಿಜಯಕುಮಾರ್ ಉದ್ಯಾವರ, ಜಿಲ್ಲಾ ವಕ್ತಾರೆ ಗೀತಾಂಜಲಿ ಸುವರ್ಣ ಉಪಸ್ತಿತರಿದ್ದರು.