ರಾಜ್ಯಾಧ್ಯಕ್ಷ ಬದಲಾಯಿಸಿದರೆ ಮಾತ್ರ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ- ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಬಿಜೆಪಿಯಿಂದ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ತೀರ್ಮಾನಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಇಂದು ಸಂಜೆ ದೆಹಲಿಗೆ ತೆರಳುವುದಾಗಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಿಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ನನಗೆ ಕರೆ ಬಂದಿದೆ ಮತ್ತು ಹಿರಿಯ ನಾಯಕನಾಗಿರುವ ನಾನು ಏಕೆ ಸ್ಪರ್ಧಿಸುತ್ತಿದ್ದೇನೆ? ಎಂದು ಕೇಳಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಆದರೆ, ಕುಟುಂಬವೊಂದು ಕರ್ನಾಟಕದಲ್ಲಿ ಬಿಜೆಪಿ ಉಸ್ತುವಾರಿಯನ್ನು ಹೊಂದಿದೆ. ಅದು ಬದಲಾಗಬೇಕು. ಈ ಕುರಿತು ದೆಹಲಿಯಲ್ಲಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದಾರೆ. ಬಿಎಸ್ ಯಡಿಯೂರಪ್ಪ ಕುಟುಂಬದ ಕಪಿಮುಷ್ಠಿಯಿಂದ ಬಿಜೆಪಿಯನ್ನು ಮುಕ್ತಗೊಳಿಸಲು ಹಾಗೂ ವಂಶ ರಾಜಕಾರಣವನ್ನು ವಿರೋಧಿಸುವ ಪ್ರಧಾನಿ ಮೋದಿಯವರ ಅಭಿಪ್ರಾಯದಂತೆ ಪಕ್ಷವನ್ನು ಸನ್ಮಾರ್ಗದಲ್ಲಿ ಸಾಗುವಂತೆ ಮಾಡಲು ತಾನು ಸ್ಪರ್ಧಿಸುತ್ತಿದ್ದೇನೆ ಎಂದು ಅಮಿತ್ ಶಾ ಅವರಿಗೆ ತಿಳಿಸಿರುವುದಾಗಿ ಈಶ್ವರಪ್ಪ ಹೇಳಿದರು.
ಬಸವನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ, ಸದಾನಂದ ಗೌಡ ಮುಂತಾದ ಪ್ರಮುಖ ಹಿಂದುತ್ವವಾದಿ ನಾಯಕರು ಸೇರಿದಂತೆ ಬಿಎಸ್‌ವೈ ಕುಟುಂಬದವರು ಹಿಂದುಳಿದ ವರ್ಗಗಳು, ದಲಿತರು ಮತ್ತು ಹಿಂದುತ್ವ ಸಿದ್ಧಾಂತವನ್ನು ನಿರ್ಲಕ್ಷಿಸಿರುವ ಬಗ್ಗೆ ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ ಎಂದರು. ಮೂರು ತಿಂಗಳ ಹಿಂದೆಯೇ ಈ ವಿಚಾರಗಳನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಚುನಾವಣೆಗೆ ಸ್ಪರ್ಧಿಸುವುದರಿಂದ ಹಿಂದೆ ಸರಿಯುವಂತೆ ಒತ್ತಡ ಹೇರಬೇಡಿ ಎಂದು ಕೇಂದ್ರ ಗೃಹ ಸಚಿವರಿಗೆ ತಿಳಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುವುದರಿಂದ ಹಿಂದೆ ಸರಿಯುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಅಮಿತ್ ಶಾ ಸೂಚಿಸಿದ್ದಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ ಮಾತ್ರ ಚುನಾವಣೆಗೆ ಸ್ಪರ್ಧಿಸುವುದರಿಂದ ಹಿಂದೆ ಸರಿಯುತ್ತೇನೆ’ ಎಂದು ಈಶ್ವರಪ್ಪ ಹೇಳಿದರು.