ಹಿಂದೂ ಸಂಘಟನೆಯ ಮುಖಂಡ ಸುರೇಂದ್ರ ಬಂಟ್ವಾಳ್ ನ ಬರ್ಬರ ಹತ್ಯೆ
ಮಂಗಳೂರು: (ಉಡುಪಿ ಟೈಮ್ಸ್ ವರದಿ) ಛಾಯಾಗ್ರಾಹಕ, ತುಳು ಚಲನಚಿತ್ರ ನಟ ಸುರೇಂದ್ರ ಬಂಟ್ವಾಳ ಅವರನ್ನು ಹತ್ಯೆಗೈದ ಘಟನೆ ಬುಧವಾರ ಮಧ್ಯಾಹ್ನ ಬಂಟ್ಚಾಳ ಸಮೀಪದ ಭಂಡಾರಿಬೆಟ್ಟಿನ ಪ್ಲ್ಯಾಟ್ ವೊಂದರಲ್ಲಿ ಬೆಳಕಿಗೆ ಬಂದಿದೆ.
ಭಂಡಾರಿಬೆಟ್ಟಿನ ವಸ್ಸಿ ಫ್ಲ್ಯಾಟ್ ನ ಐದನೇ ಮಹಡಿಯಲ್ಲಿ ಈತ ವಾಸ್ತವ್ಯವಿದ್ದರು. ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಮಧ್ಯಾಹ್ನದವರೆಗೆ ಮನೆಯಿಂದ ಹೊರಬಾರದೇ ಇರುವುದರಿಂದ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪರಿಶೀಲಿಸಿದಾಗ ಈತ ವಾಸವಿರುವ ಕೊಠಡಿಯಲ್ಲಿ ರಕ್ತದ ಮಡವಿನಲ್ಲಿ ಮೃತದೇಹ ಕಂಡುಬಂದಿದೆ.
ಬಂಟ್ವಾಳ ಭಂಡಾರಿಹಿತ್ಲು ನಿವಾಸಿಯಾಗಿರುವ ಸುರೇಂದ್ರ ಕೆಲ ವರ್ಷಗಳ ಹಿಂದೆ ಹಿಂದು ಸಂಘಟನೆಯಲ್ಲಿಯೂ ಗುರುತಿಸಿಕೊಂಡಿದ್ದು, ಈತನ ಮೇಲೆ ಹಲವು ಪ್ರಕರಣಗಳೂ ದಾಖಲಾಗಿದ್ದವು. ಕೆಲಸಮಯದ ಹಿಂದೆ ಈತ ಭಂಡಾರಿಬೆಟ್ಟಿನ ಫ್ಲ್ಯಾಟ್ ನಲ್ಲಿ ಏಕಾಂಗಿಯಾಗಿ ವಾಸವಿದ್ದು, ಈತನ ತಾಯಿ ಹಾಗೂ ಸಹೋದರ ಅಲ್ಲೇ ಪಕ್ಕದ ಕಳ್ಳಿಮಾರ್ ನಲ್ಲಿ ವಾಸವಿದ್ದಾರೆ. ಈತನ ಜೊತೆಗಿದ್ದವರೇ ಈ ಕೃತ್ಯ ಎಸಗಿರಬೇಕೆಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲಂಟಿನ್ ಡಿಸೋಜ, ಇನ್ಸ್ ಪೆಕ್ಟರ್ ನಾಗರಾಜ್ ಬಂಟ್ವಾಳ ನಗರ ಠಾಣೆಯ ಎಸ್ಐ ಕಲೈಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸುರೇಂದ್ರ ಕೆಲ ಸಮಯದಿಂದ ಹಣಕಾಸು ವ್ಯವಹಾರ ನಡೆಸುತ್ತಿದ್ದು, ಇದೇ ವಿಚಾರವಾಗಿ ಕೊಲೆ ನಡೆದಿರಬೇಕೆಂಬ ಗುಮಾನಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.