ಕೊಂಕಣ ರೈಲ್ವೆ ಸಿಎಂಡಿಯಾಗಿ ಸಂತೋಷ್ ಕುಮಾರ್ ಝಾ ಅಧಿಕಾರ ಸ್ವೀಕಾರ
ಉಡುಪಿ, ಎ.1: ಕೊಂಕಣ ರೈಲ್ವೆಯ ನೂತನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ಸಂತೋಷ್ ಕುಮಾರ್ ಝಾ ಅವರು ಎ.1ರಂದು ನವಿ ಮುಂಬೈಯ ಬೇಲಾಪುರದಲ್ಲಿರುವ ಕೊಂಕಣ ರೈಲ್ವೆ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
1992ನೇ ಬ್ಯಾಚ್ನ ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವೀಸಸ್(ಐಆರ್ ಟಿಎಸ್) ಅಧಿಕಾರಿಯಾಗಿರುವ ಝಾ ಅವರು ಇದಕ್ಕೆ ಮುನ್ನ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿ. (ಕೆಆರ್ಸಿಎಲ್)ನ ನಿರ್ವಹಣೆ ಮತ್ತು ವಾಣಿಜ್ಯ ವಿಭಾಗದ ನಿರ್ದೇಶಕರಾಗಿದ್ದರು. ಕಳೆದ ಎಂಟು ವರ್ಷಗಳಿಂದ ಕೊಂಕಣ ರೈಲ್ವೆಯನ್ನು ಸಿಎಂಡಿ ಆಗಿ ಮುನ್ನಡೆಸಿದ್ದ ಸಂಜಯ್ ಗುಪ್ತಾ ರವಿವಾರ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
ಲಕ್ನೋ ವಿವಿಯಿಂದ ಎಂಎಸ್ಸಿ (ಜಿಯಾಲಜಿ) ಹಾಗೂ ಮುಂಬೈಯ ಜಮ್ನಾಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಿಂದ ಎಂಬಿಎ ಪದವಿ ಪಡೆದಿರುವ ಸಂತೋಷ್ ಕುಮಾರ್ ಝಾ ಅವರು ರೈಲ್ವೆ ನಿರ್ವಹಣೆ, ಮೂಲಭೂತ ಸೌಲಭ್ಯ ಯೋಜನೆ, ವ್ಯವಹಾರ ಅಭಿವೃದ್ಧಿ ಕ್ಷೇತ್ರದಲ್ಲಿ 28 ವರ್ಷಗಳ ಅನುಭವ ಹೊಂದಿದ್ದಾರೆ.
ರೈಲ್ವೆಯ ಪ್ರಮುಖ ವಿಭಾಗಗಳಲ್ಲಿ ನಿರ್ವಹಣಾ ಮುಖ್ಯಸ್ಥರಾಗಿ, ಲಾಜಿಸ್ಟಿಕ್ ವಲಯದ ಪ್ರಮುಖ ವ್ಯವಹಾರ ಘಟಕಗಳ ನಿರ್ವಹಣೆ ಜೊತೆಗೆ ವಾಣಿಜ್ಯ ಮತ್ತು ವ್ಯವಹಾರ ಅಭಿವೃದ್ಧಿ ವಿಭಾಗದಲ್ಲಿ 15 ವರ್ಷಗಳ ಅನುಭವ ಇವರು ಹೊಂದಿದ್ದಾರೆ.