ವಂಡ್ಸೆ: ಹೊಲಿಗೆ ಕೇಂದ್ರ ಬಂದ್- ಸರಣಿ ಪ್ರತಿಭಟನೆ, ಸತ್ಯಾಗ್ರಹ
ಕುಂದಾಪುರ: ‘ವಂಡ್ಸೆಯಲ್ಲಿ ಮಹಿಳೆಯರ ‘ಸ್ವಾವಲಂಬನಾ ಹೊಲಿಗೆ ವೃತ್ತಿ ತರಬೇತಿ ಕೇಂದ್ರ’ ವನ್ನು ರಾತ್ರಿ ಕಾಲದಲ್ಲಿ ಸ್ಥಳಾಂತರ ನೆಪದಲ್ಲಿ ಮುಚ್ಚಿಸಿರುವುದು ಖಂಡನೀಯ’ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿಗೆ ಸಮೀಪದ ಕಟ್ಬೇಲ್ತೂರು ಗ್ರಾಮ ಪಂಚಾಯಿತಿ ಬಳಿಯಲ್ಲಿ ಸೋಮವಾರ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟ, ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ತಾಲ್ಲೂಕು ಸಮಿತಿ ಕುಂದಾಪುರ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ವಂಡ್ಸೆಯ ಸ್ವಾವಲಂಬನಾ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರ ಮುಚ್ಚಿಸಿರುವುದನ್ನು ಖಂಡಿಸಿ ಸೋಮವಾರ ಆಯೋಜಿಸಿದ್ದ ಸರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
‘ಶೀಘ್ರ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳ ಸಭೆ ನಡೆಸಿ, ಬದುಕು ಕಟ್ಟಿಕೊಂಡಿದ್ದ ಮಹಿಳೆಯರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ಮಾತನಾಡಿ, ಮಹಿಳೆಯರಿಗೆ ಹಾಗೂ ಸಮಾಜದ ಶೋಷಿತ ವರ್ಗದ ಜನರಿಗೆ ಅನ್ಯಾಯವಾದರೆ ನಮ್ಮ ಸಮಿತಿಯ ಮೂಲಕ ರಾಜ್ಯದಾದ್ಯಂತ ಹೋರಾಟ ಸಂಘಟಿಸುತ್ತೇವೆ’ ಎಂದು ಎಚ್ಚರಿಸಿದರು.
ಜಿಲ್ಲಾ ರೈತ ಸಂಘದ ಮುಖಂಡ ಕೆ.ವಿಕಾಸ ಹೆಗ್ಡೆ, ತಾಲ್ಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಅಡ್ಕೆಕೊಡ್ಲು ಉದಯ್ಕುಮಾರ ಶೆಟ್ಟಿ ಮಾತನಾಡಿದರು. ಪ್ರಮುಖರಾದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಕ್ಲಾಡಿ ಸಂತೋಷ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡ ಪ್ರಶಾಂತ್ ಪೂಜಾರಿ ಕರ್ಕಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ವಾಸುದೇವ ಪೈ, ಉದಯ ಪೂಜಾರಿ, ಪ್ರಮುಖರಾದ ನಾಗಪ್ಪ ಕೊಠಾರಿ, ಸಂತೊಷ್ ಕುಮಾರ್ ಶೆಟ್ಟಿ ಬಲಾಡಿ, ಮಂಜುಳಾ ದೇವಾಡಿಗ, ಶ್ರೀನಿವಾಸ ಗಾಣಿಗ, ಚಂದ್ರ ನಾಯ್ಕ್, ಶೇಖರ್ ಬಳೆಗಾರ್, ಕೃಷ್ಣಮೂರ್ತಿ ರಾವ್, ಶರತ್ಚಂದ್ರ ಶೆಟ್ಟಿ ಇದ್ದರು.