ಜಿಲ್ಲಾಮಟ್ಟದ ಪತ್ರಕರ್ತರ ವಾಲಿಬಾಲ್ ಪಂದ್ಯಾಟ: ಉಡುಪಿ ತಂಡ ವಿನ್ನರ್ಸ್- ಕಾರ್ಕಳ ರನ್ನರ್ಸ್ ಪ್ರಶಸ್ತಿ
ಕಾರ್ಕಳ, ಮಾ.30: ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕಾರ್ಕಳ ಕುಕ್ಕುಂದೂರು ಗಣಿತ ನಗರ ಜ್ಞಾನಸುಧಾ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ ಮಟ್ಟದ ಪತ್ರಕರ್ತರ ವಾಲಿಬಾಲ್ ಪಂದ್ಯಾಟದಲ್ಲಿ ಉಡುಪಿ ತಂಡ ವಿನ್ನರ್ಸ್ ಹಾಗೂ ಕಾರ್ಕಳ ತಂಡವು ರನ್ನರ್ಸ್ ಪ್ರಶಸ್ತಿ ಗೆದ್ದುಕೊಂಡಿತು.
ವೈಯಕ್ತಿಕ ಪ್ರಶಸ್ತಿಯನ್ನು ಉಡುಪಿ ತಂಡದ ಅನಿಲ್ ಕೈರಂಗಳ, ಪ್ರಜ್ವಲ್ ಹಾಗೂ ಕಾರ್ಕಳ ತಂಡದ ಉದಯ್ ಮುಂಡ್ಕೂರು ಪಡೆದುಕೊಂಡರು. ಪಂದ್ಯಾಟದಲ್ಲಿ ಉಡುಪಿ ಎ ಮತ್ತು ಬಿ, ಕಾರ್ಕಳ, ಕುಂದಾಪುರ ತಂಡಗಳು ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಅಜೆಕಾರು ಪದ್ಮ ಗೋಪಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಪಂದ್ಯಾಟ ಉದ್ಘಾಟನೆ:ಪಂದ್ಯಾಟವನ್ನು ಕರ್ನಾಟಕ ರಾಜ್ಯ ಕ್ವಾರಿ ಹಾಗೂ ಕ್ರಷರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಉದ್ಘಾಟಿಸಿ ಶುಭ ಹಾರೈಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಅಜೆಕಾರು ಪದ್ಮಗೋಪಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಮಣಿಪಾಲ ಕೆ.ಎಂ.ಸಿ.ಯ ಸೇಲ್ಸ್ ಹಾಗೂ ಮಾರ್ಕೇಟಿಂಗ್ ವಿಭಾಗದ ಮ್ಯಾನೇಜರ್ ಮೋಹನ್ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಫ್ ವಹಿಸಿದ್ದರು.
ವೇದಿಕೆಯಲ್ಲಿ ಜ್ಞಾನಸುಧ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ದಿನೇಶ್ ಕೊಡವೂರು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜಿಲ್ಲಾ ಸಮಿತಿ ಸದಸ್ಯ ಉದಯ್ ಮುಂಡ್ಕೂರು, ತಾಲೂಕು ಸಂಘದ ಕಾರ್ಯದರ್ಶಿ ಹರೀಶ್ ಆಚಾರ್ಯ, ಕೋಶಾಧಿಕಾರಿ ಖಲೀಲ್ ಕಾರ್ಕಳ ಉಪಸ್ಥಿತರಿದ್ದರು.
ವಾಸುದೇವ ಭಟ್ ಪ್ರಾರ್ಥಿಸಿದರು. ಕೃಷ್ಣ ನಾಯಕ್ ಸ್ವಾಗತಿಸಿದರು. ಬಾಲಕೃಷ್ಣ ಭೀಮಗುಳಿ ವಂದಿಸಿದರು. ಹರೀಶ್ ಸಚ್ಚೇರಿಪೇಟೆ ಕಾರ್ಯಕ್ರಮ ನಿರೂಪಿಸಿದರು.