ಯತ್ನಾಳರಿಗೆ ಸಿಎಂ ಬಿಸಿ ಮುಟ್ಟಿಸಿದ್ದಾರೆ, ಆದ್ದರಿಂದ ಸತ್ಯ ಹೇಳಲು ಶುರುಮಾಡಿದ್ದಾರೆ – ನಾವು ಚುನಾವಣೆಗೆ ಸಿದ್ಧ: ಸಿದ್ದರಾಮಯ್ಯ

ಬಾಗಲಕೋಟೆ: ರಾಜ್ಯ ಬಿಜೆಪಿ ಸರಕಾರವನ್ನು ಪತನಗೊಳಿಸಲು ನಾವಂತೂ ಪ್ರಯತ್ನಿಸುತ್ತಿಲ್ಲ. ಆದರೆ ಬಿಜೆಪಿಯವರೇ ತಮ್ಮಲ್ಲಿನ ತಿಕ್ಕಾಟದಿಂದ ಸರಕಾರ ಬೀಳಿಸಿಕೊಂಡರೆ ನಾವು ಚುನಾವಣೆಗೆ ಸಿದ್ಧರಾಗಿದ್ದೇವೆಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ನವರು ಅನುದಾನ ಕಡಿತ ಮಾಡಿದರು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಆದರೀಗ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು, ತನ್ನ ಕ್ಷೇತ್ರದ ಅನುದಾನವನ್ನು ಯಡಿಯೂರಪ್ಪ ನವರೇ ಕಡಿತ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾವು ಸತ್ಯ ಹೇಳುತ್ತಿದ್ದೆವು. ಸದ್ಯ ಯತ್ನಾಳ ಅವರಿಗೆ ಯಡಿಯೂರಪ್ಪ ಬಿಸಿ ಮುಟ್ಟಿಸಿದ್ದಾರೆ. ಅದಕ್ಕೆ ಅವರು ಸತ್ಯ ಹೇಳಲು ಶುರುಮಾಡಿದ್ದಾರೆ ಎಂದರು.

ವಿಪರ್ಯಾಸವೆಂದರೆ ಪ್ರವಾಹ ಸಂತ್ರಸ್ತರಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಒಂದು ರೂಪಾಯಿ ಕೊಟ್ಟಿಲ್ಲ. ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿಯವರು ಯಾವಾಗಲೂ ಮಲತಾಯಿ ಧೋರಣೆ ಅನುಸರಿಸುತ್ತಾರೆ ಎಂದು ಆರೋಪಿಸಿದರು.

ಕಳೆದ ಬಾರಿ ಭೀಕರ ಪ್ರವಾಹ ಬಂದಾಗಲೂ ಪ್ರಧಾನಿ ಮೋದಿ ರಾಜ್ಯಕ್ಕೆ ನೆರವು ನೀಡಿಲ್ಲ. ಈಗಲೂ ಅವರಿಂದ ಏನನ್ನೂ ನಿರೀಕ್ಷೆ ಮಾಡುವ ಆಗಿಲ್ಲ, ಮುಂದಿನ ಚುನಾವಣೆಗಳಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಇದೇ ವೇಳೆ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವ ಚಚೆ೯ ನಡೆಯುತ್ತಿರುವುದು ನಿಜ. ಆದರೆ ಯಾವಾಗ ಇಳಿಸ್ತಾರೆ, ಯಾರು ಸಿಎಂ ಆಗ್ತಾರೆ ಅಂತ ನನಗೆ ಗೊತ್ತಿಲ್ಲ, ಚಚೆ೯ಯಂತೂ ನಡೀತಾ ಇದೆ ಎಂದರು.

Leave a Reply

Your email address will not be published. Required fields are marked *

error: Content is protected !!