ಪ್ರತೀ ಹೆಣ್ಣು ಹುಟ್ಟಿನಿಂದಲೇ ಸ್ವತಂತ್ರಳು: ಡಾ.ವೈ ಭರತ್ ಶೆಟ್ಟಿ

ಮಂಗಳೂರು ಅ. 20:-ಪ್ರತೀ ಹೆಣ್ಣು ಹುಟ್ಟಿನಿಂದಲೇ ಸ್ವತಂತ್ರಳು, ಇದನ್ನು ಸಮಾಜ ಮನವರಿಕೆ ಮಾಡಿಕೊಳ್ಳಬೇಕೆಂದು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.
 ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಕಾರ್ಯಕ್ರಮದ ಅಂಗವಾಗಿ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಮಹಿಳೆಯರ ಮೇಲೆ ನಾನಾ ರೀತಿಯ ದೌರ್ಜನ್ಯ ಆಗುತ್ತಿದ್ದು, ಹೆಣ್ಣನ್ನು ಗೌರವಿಸುವ ಮನೋಭಾವವನ್ನು ಪ್ರತಿಯೊಬ್ಬ ಪುರುಷ ರೂಪಿಸಿಕೊಳ್ಳಬೇಕು. ಮನೆಯಲ್ಲಿ ಹೆಣ್ಣು-ಗಂಡು ಮಕ್ಕಳ ನಡುವೆ ತಾರತಮ್ಯ ಮಾಡದೆ ಸಮಾನತೆಯಿಂದ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಕಡಿಮೆಯಾಗಿದ್ದು, ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ತಳಮಟ್ಟದ ಜನರಿಗೂ ಅರಿವು ಮೂಡಿಸುವ ಕಾರ್ಯ ಆಗಬೇಕು. ಜೊತೆಗೆ ಆಯಾ ಧರ್ಮದ ಧಾರ್ಮಿಕ ಮುಖಂಡರುಗಳು ತಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಠಿಸಬೇಕು ಎಂದು ಹೇಳಿದರು.

 2018-19 ನೇ ಸಾಲಿನಲ್ಲಿ ಸರಕಾರ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಜಾರಿಗೊಳಿಸಿದ್ದು, ಈಗಾಗಲೇ ಜಿಲ್ಲೆಯಲ್ಲಿ ತರಬೇತಿ ಮತ್ತು ಸಾಮಾಥ್ರ್ಯಭಿವೃದ್ಧಿ  ಅರಿವು ಕಾರ್ಯಕ್ರಮ, ಹೆಣ್ಣು ಹೆತ್ತವರಿಗೆ ಪ್ರೋತ್ಸಾಹಧನ, ಪಠ್ಯೇತರ ಚಟುವಟಿಕೆಯಲ್ಲಿ ವಿಶಿಷ್ಟ ಸಾಧನೆಗೈದ ಮಕ್ಕಳಿಗೆ ಪುರಸ್ಕಾರ, ಗ್ರಾಮ ಪಂಚಾಯತ್‍ಗಳಲ್ಲಿ ಬೀದಿ ನಾಟಕ, ಜಾಥಾ, ಆಂದೋಲನ, ವೈದ್ಯಾಧಿಕಾರಿಗಳಿಗೆ, ಪ್ರಯೋಗಾಶಾಲಾ ತಂತ್ರಜ್ಞರಿಗೆ ಪಿಸಿ & ಪಿಎನ್‍ಡಿಟಿ ಕಾಯಿದೆ ಕುರಿತು ತರಬೇತಿ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 950 ಇದ್ದ ಲಿಂಗಾನುಪಾತ 2019-20ರಲ್ಲಿ 931 ಕ್ಕೆ ಇಳಿಕೆಯಾಗಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಲಿಂಗಾನುಪಾತ ಇದಕ್ಕಿಂತ ಕಡಿಮೆ ಇದ್ದರೂ ಅಂತರದಲ್ಲಿ ಇಳಿಕೆ ಇದೆ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಶ್ಯಾಮಲಾ ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ 17 ಸರಕಾರಿ, ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿನಿಯರನ್ನು ಗುರುತಿಸಿ ಪುರಸ್ಕರಿಸಲಾಯಿತು.  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದ 17 ಸರಕಾರಿ ಅನುದಾನಿತ ಪ್ರೌಢಶಾಲೆಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.  2019-20 ನೇ ಸಾಲಿನಲ್ಲಿ ಗರಿಷ್ಠ ಹೆಣ್ಣು ಮಕ್ಕಳು ಜನಿಸಿರುವ 5 ಗ್ರಾಮ ಪಂಚಾಯತ್‍ಗಳ ಪಿ.ಡಿ.ಓ. ಹಾಗೂ ಆಡಳಿತಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೆಣ್ಣು ಮಕ್ಕಳ ಸ್ನೇಹಿ ಶಾಲೆಯ ವಾತಾವರಣ ಕಲ್ಪಿಸುವ ಒಂದು ಶಾಲಾ ನಿರ್ವಹಣಾ ಸಮಿತಿಗೆ ರೂ. 30,000 ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಪ್ರತಿ ತಿಂಗಳಮೊದಲ ಗುರುವಾರ ಜನಿಸಿದ ಹೆಣ್ಣು ಮಕ್ಕಳ ಹತ್ತವರಿಗೆ ರೂ 1,000 ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಆರ್, ಸಾರ್ವಜನಿಕ ಶಿಕ್ಞಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ಮಂಗಳೂರು ಮಹನಗರಪಾಲಿಕೆಯ ಮಹಾಪೌರ ದಿವಾಕರ್ ಪಾಂಡೇಶ್ವರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್‍ಸರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಟಿ.ಪಾಪಬೋವಿ ಮತ್ತಿತರರು ಉಪಸ್ಥಿತರಿದ್ಧರು.

Leave a Reply

Your email address will not be published. Required fields are marked *

error: Content is protected !!