ನಿಧಿಯ ಆಸೆ ತೋರಿಸಿ ಮೂವರ ಹತ್ಯೆ ಪ್ರಕರಣ -6 ಮಂದಿ ಹಂತಕರ ಸೆರೆ
ತುಮಕೂರು : ತಾಲೂಕಿನ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ 3 ಶವಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಅವರು, ಪುಟ್ಟಸ್ವಾಮಯ್ಯ ಪಾಳ್ಯದ ಮಧು (24), ಸಂತೆಪೇಟೆಯ ನವೀನ್ (24), ವೆಂಕಟೇಶಪುರದ ಕೃಷ್ಣ (22), ಹೊಂಬಯ್ಯನಪಾಳ್ಯದ ಗಣೇಶ (19), ನಾಗಣ್ಣ ಪಾಳ್ಯದ ಕಿರಣ್ (23) ಹಾಗೂ ಕಾಳಿದಾಸನಗರದ ಸೈಮನ್ (18) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಹೇಳಿದರು.
ಸಂಚು ಹೆಣೆದ ದುಷ್ಕರ್ಮಿಗಳು: ಬಂಧಿತ ಆರೋಪಿಗಳು 3 ಕೆ.ಜಿ. ಚಿನ್ನ ಕೊಡುವ ಆಮಿಷವೊಡ್ಡಿ ಸಂಚು ರೂಪಿಸಿ ಬೀರನಕಲ್ಲು ಬೆಟ್ಟದ ಸಮೀಪ ಕರೆದೊಯ್ದು ಮಚ್ಚು, ಡ್ರಾಗನ್, ಲಾಂಗ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಅನಂತರ ಅವರದ್ದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಬಂದು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದು ತನಿಖೆಯಲ್ಲಿ ತಿಳಿದು ಬಂದಿದೆ ಎಂದರು.
ನಿಧಿಯ ಚಿನ್ನ ಆಮಿಷ ಕುಚ್ಚಂಗಿ ಕೆರೆಯಲ್ಲಿ ಸಿಕ್ಕ ಕಾರಿನಲ್ಲಿ ಮೂರು ಮೃತದೇಹ ಪತ್ತೆ ಪ್ರಕರಣವನ್ನು ಭೇದಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿ ಯಾಗಿದ್ದಾರೆ. ನಿಧಿಯಲ್ಲಿ ಸಿಕ್ಕ ಚಿನ್ನವನ್ನು ಕೊಳ್ಳುವ ಆಮಿಷವನ್ನು ನಂಬಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಹೋಗಿದ್ದ ಮೂವರಿಗೆ ಮೋಸ ಮಾಡಿ ಅವರನ್ನು ಕೊಂದು ಚಿನ್ನ ಕೊಳ್ಳಲು ತಂದಿದ್ದ ಹಣವನ್ನು ದೋಚಿರುವ ಘಟನೆ ಇದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಇಶಾಕ್ ಸೀಮಮ್ (54), ಶಾಹುಲ್ ಹಮೀದ್ (45), ಸಿದ್ಧಿಕ್ (34)ಅವರು ಮೃತಪಟ್ಟವರು. ಪ್ರಕರಣ ಸಂಬಂಧ ತುಮಕೂರಿನ ಶಿರಾಗೇಟ್ನ ಪಾತರಾಜು ಅಲಿಯಾಸ್ ರಾಜು (35), ಸತ್ಯಮಂಗಲದ ವಾಸಿ ಗಂಗರಾಜು (35)ನನ್ನು ವಿಚಾರಣೆ ಮಾಡಿದಾಗ ಕೊಲೆ ಬಗ್ಗೆ ತಿಳಿದುಬಂದಿತ್ತು.
ನಿಧಿ ಹುಡುಕುವ ಕೃತ್ಯ: ಮೃತರು ಪಾತರಾಜು ಜತೆ ಸೇರಿ ಕಳೆದ 6-7 ತಿಂಗಳಿನಿಂದ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದು, ನಿಧಿಗಾಗಿ ಪಾತರಾಜನಿಗೆ ಸುಮಾರು 6 ಲಕ್ಷ ರೂ. ಹಣ ನೀಡಿದ್ದರು. ಹಣ ನೀಡಿ 6 ತಿಂಗಳು ಕಳೆದರೂ ನಿಧಿ ಹುಡುಕಿ ಕೊಡದಿದ್ದ ಕಾರಣ ಹಣ ವಾಪಸು ಕೇಳಿದ್ದಾರೆ. ಹಣ ಕೊಡದಿದ್ದರೆ ಪೊಲೀಸರಿಗೆ ದೂರು ಕೊಡುವುದಾಗಿ ಮೃತರು ಪಾತರಾಜನ ಹಿಂದೆ ಬಿದ್ದಿದ್ದರಿಂದ ಅವರನ್ನು ಹೇಗಾದರು ಮಾಡಿ ಕೊಲೆ ಮಾಡಬೇಕೆಂದು ನಿರ್ಧರಿಸಿ ಪಾತರಾಜು ತನಗೆ ಪರಿಚಯವಿದ್ದ ಸತ್ಯಮಂಗಲದ ಗಂಗರಾಜು ಆತನ ಸಹಚರರ ಜತೆಗೆ ಸೇರಿ ಕೊಲೆ ಮಾಡಿದ್ದಾನೆ.