ಬ್ಯಾಂಕ್ ಖಾತೆ ಸ್ಥಗಿತ: ರೈಲು ಟಿಕೆಟ್‌ಗೂ ಹಣವಿಲ್ಲ- ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಹೊಸದಿಲ್ಲಿ: “ನಮ್ಮ ಪಕ್ಷದ ಬ್ಯಾಂಕ್‌ ಖಾತೆಯನ್ನೇ ಸ್ಥಗಿತ ಗೊಳಿಸಿದ್ದಾರೆ. ರೈಲು ಟಿಕೆಟ್‌ ಖರೀದಿ ಸಲು ಕೂಡ ಹಣವಿಲ್ಲ. ಅತೀ ದೊಡ್ಡ ವಿಪಕ್ಷವಾಗಿದ್ದರೂ ನಮಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ…’ಚುನಾವಣೆಗೆ ಹೊಸ್ತಿಲಿನಲ್ಲಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್‌, ಐಟಿ ಇಲಾಖೆಯು ಪಕ್ಷದ ಬ್ಯಾಂಕ್‌ ಖಾತೆ ಯನ್ನು ಸ್ಥಗಿತಗೊಳಿಸಿರುವುದನ್ನು ಪ್ರಸ್ತಾವಿಸಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದೆ.

ಗುರುವಾರ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಆರ್ಥಿಕವಾಗಿ ಕಾಂಗ್ರೆಸ್ಸಿನ ಕತ್ತುಹಿಸುಕಲು ಪ್ರಧಾನಿ ವ್ಯವಸ್ಥಿತ ಪ್ರಯತ್ನ ನಡೆಸಿದ್ದಾರೆ ಎಂದು ಸೋನಿಯಾ ಆರೋಪಿಸಿದ್ದಾರೆ. ಇಂದು ನಾವು ಎತ್ತುತ್ತಿರುವ ಗಂಭೀರ ವಿಚಾರವು ಕೇವಲ ನಮ್ಮ ಪಕ್ಷಕ್ಕಷ್ಟೇ ಅಲ್ಲ, ಪ್ರಜಾಪ್ರಭುತ್ವಕ್ಕೇ ಧಕ್ಕೆ ತರುವಂಥದ್ದು. ಸಾರ್ವಜನಿಕರು ನಮ್ಮ ಪಕ್ಷಕ್ಕೆ ನೀಡಿರುವ ದೇಣಿಗೆಯನ್ನು ಬಿಜೆಪಿ ಲೂಟಿ ಮಾಡಿದೆ ಎಂದರು.

ಆಯೋಗವೂ ಏನೂ ಮಾಡುತ್ತಿಲ್ಲ
ರಾಹುಲ್‌ ಗಾಂಧಿ ಮಾತನಾಡಿ ನಮ್ಮ ಎಲ್ಲ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನಮಗೆ ಚುನಾವಣೆಗೆ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ, ನಮ್ಮ ಕಾರ್ಯಕರ್ತರಿಗೆ ನೆರವಾಗಲು, ಅಭ್ಯರ್ಥಿಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ, ನಮ್ಮ ನಾಯಕರು ದೇಶದ ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ಸಂಚರಿಸಲು ಆಗುತ್ತಿಲ್ಲ, ಪಕ್ಷದ ಪರ ಜಾಹೀರಾತು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ. ಚುನಾವಣೆಗೆ 2 ತಿಂಗಳು ಇರುವಾಗಲೇ ಈ ರೀತಿ ಮಾಡಲಾಗಿದೆ. 90ರ ದಶಕದ ಯಾವುದೋ ಕೇಸ್‌ನಲ್ಲಿ ಒಂದು ನೋಟಿಸ್‌ ನೀಡಲಾಗಿದೆ, 6-7 ವರ್ಷಗಳ ಹಿಂದಿನ ಕೇಸ್‌ನಲ್ಲಿ ಮತ್ತೂಂದು ನೋಟಿಸ್‌ ನೀಡಲಾಗಿದೆ. ಇಷ್ಟೆಲ್ಲ ಆದರೂ ಚುನಾವಣ ಆಯೋಗ ಏನೂ ಮಾಡುತ್ತಿಲ್ಲ. ಚುನಾವಣೆ ನ್ಯಾಯಸಮ್ಮತವಾಗಿ ನಡೆಯಬೇಕಾದರೆ ಪಕ್ಷದ ಖಾತೆಯನ್ನು ಸಕ್ರಿಯಗೊಳಿಸಿ ಎಂದು ಖರ್ಗೆ ಆಗ್ರಹಿಸಿದ್ದಾರೆ. ಆಡಳಿತ ಪಕ್ಷವು ಚುನಾವಣ ಬಾಂಡ್‌ ಮೂಲಕ ಭರಪೂರ ದೇಣಿಗೆಯನ್ನು ಸಂಗ್ರಹಿಸಿ ಕೊಂಡು, ವಿಪಕ್ಷ ಕಾಂಗ್ರೆಸ್‌ನ ಖಾತೆಯನ್ನು ಸ್ಥಗಿತಗೊಳಿಸುವುದು ಸರಿಯಲ್ಲ ಎಂದಿದ್ದಾರೆ.

ಏನಿದು ವಿವಾದ?
2018-19ನೇ ಹಣಕಾಸು ವರ್ಷದ ತೆರಿಗೆ ಹಣ ಬಾಕಿ ಮತ್ತು ದಂಡದ ಮೊತ್ತವಾಗಿ 210 ಕೋ. ರೂ. ಪಾವತಿಸಬೇಕೆಂದು ಸೂಚಿಸಿದ್ದ ಐಟಿ ಇಲಾಖೆಯು ಕಳೆದ ತಿಂಗಳು ಕಾಂಗ್ರೆಸ್‌ನ ಖಾತೆಯಲ್ಲಿದ್ದ 115 ಕೋ. ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದನ್ನು ಪ್ರಶ್ನಿಸಿ ಪಕ್ಷವು ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿಯು ಇತ್ಯರ್ಥಗೊಳ್ಳುವ ಮುನ್ನವೇ ಪಕ್ಷದ 3 ಖಾತೆಗಳಿಗೆ 65 ಕೋಟಿ ರೂ.ಗಳನ್ನು ಐಟಿ ಇಲಾಖೆ ವಿತ್‌ಡ್ರಾ ಮಾಡಿದೆ ಎಂದು ಕಾಂಗ್ರೆಸ್‌ ನಾಯಕ ಅಜಯ್‌ ಮಾಕನ್‌ ಆರೋಪಿಸಿದ್ದರು. ಇದಾದ ಬಳಿಕ ಐಟಿ ಇಲಾಖೆ ಕ್ರಮಕ್ಕೆ ತಡೆ ತರುವಂತೆ ಕೋರಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯನ್ನು ಮೇಲ್ಮನವಿ ಪ್ರಾಧಿಕಾರ ವಜಾ ಮಾಡಿತ್ತು. ಖಾತೆಯಲ್ಲಿರುವ ಮೊತ್ತವು ಐಟಿ ಇಲಾಖೆಯ ವಶದಲ್ಲಿರುವ ಕಾರಣ ಚುನಾವಣೆಗೆ ವೆಚ್ಚ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಕಾಂಗ್ರೆಸ್‌ನ ಅಳಲು.

ಆರೋಪವೇನು?
ಕಾಂಗ್ರೆಸ್‌ನ ಬ್ಯಾಂಕ್‌ ಖಾತೆ ಮೇಲಿನ ದಾಳಿಯು ಪ್ರಜಾ ಪ್ರಭುತ್ವದ ಮೇಲಿನ ದಾಳಿ
ಪ್ರಧಾನ ವಿಪಕ್ಷದ ಹಣಕಾಸಿನ ದಾರಿ ಯನ್ನೇ ಸಂಪೂರ್ಣ ಮುಚ್ಚಲಾಗಿದೆ.
ಪಕ್ಷವು ಚುನಾವಣೆ ಪ್ರಚಾರಕ್ಕೆ, ಅಭಿಯಾನಕ್ಕೆ ಹಣ ವೆಚ್ಚ ಮಾಡದಂತೆ ಮಾಡಲಾಗಿದೆ.
ಅಭ್ಯರ್ಥಿಗಳಿಗೂ ಹಣ ಕೊಡದಂತೆ ಮಾಡಲಾಗಿದೆ. ಹೀಗಿದ್ದ ಮೇಲೆ ಚುನಾವಣೆ ನಡೆಸುತ್ತಿರುವುದಾದರೂ ಏಕೆ?

Leave a Reply

Your email address will not be published. Required fields are marked *

error: Content is protected !!