ಅತಿ ಎತ್ತರದ ಯೇಸು ಪ್ರತಿಮೆ ವಿವಾದ: ಕಪಾಲ ಬೆಟ್ಟದ ಕಾಮಗಾರಿಗೆ ಹೈಕೋರ್ಟ್ ತಡೆ
ಬೆಂಗಳೂರು: ತೀವ್ರ ವಿವಾದ ಸೃಷ್ಟಿಸಿರುವ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕಪಾಲಬೆಟ್ಟದಲ್ಲಿನ ನಿರ್ಮಾಣ ಕಾರ್ಯಗಳಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕಪಾಲ ಬೆಟ್ಟದಲ್ಲಿ ಸುಮಾರು 80 ಅಡಿ ಎತ್ತರದ ಯೇಸು ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಕಪಾಲ ಬೆಟ್ಟದಲ್ಲಿ ಚರ್ಚ್ ನಿರ್ಮಿಸಲು ಸರ್ಕಾರ ಹತ್ತು ಎಕರೆ ಭೂಮಿಯನ್ನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಹಾರೋಬೆಲೆ ಗ್ರಾಮದ ನಿವಾಸಿಗಳಾದ ಆಂಥೋಣಿ ಸ್ವಾಮಿ ಹಾಗೂ ಇತರೆ ಏಳು ಜನರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ನ್ಯಾಯಾಲಯದ ಅನುಮತಿ ಇಲ್ಲದೆ ಈ ಜಾಗದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂದು ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ಗೆ ಸೂಚನೆ ನೀಡಿದೆ.
‘ಭೂ ಮಂಜೂರಾತಿ ನಿಯಮಗಳನ್ನು ಉಲ್ಲಂಘಿಸಿ 10 ಎಕರೆ ಗೋಮಾಳವನ್ನು ಮಂಜೂರು ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಅವದ ಸಹೋದರ, ಸಂಸದ ಡಿಕೆ ಸುರೇಶ್ ಮುಂದಾಳತ್ವ ವಹಿಸಿ ಜಮೀನು ಮಂಜೂರು ಮಾಡಿಸಿದ್ದಾರೆ.
ಟ್ರಸ್ಟ್ನಿಂದ ಮನವಿ ಸಲ್ಲಿಕೆಯಾಗುವ ಮೊದಲೇ ಭೂಮಂಜೂರಾತಿ ಪ್ರಕ್ರಿಯೆ ಆರಂಭಿಸಲಾಗಿತ್ತು’ ಎಂದು ಆರೋಪಿಸಲಾಗಿದೆ. ‘ಭೂ ಮಂಜೂರಾತಿ ಸಂಬಂಧ 2017ರ ಫೆಬ್ರವರಿ 15ರಂದು ಡಿಕೆ ಶಿವಕುಮಾರ್ ಮತ್ತು ಅದೇ ತಿಂಗಳ 20ರಂದು ಡಿಕೆ ಸುರೇಶ್ ಅವರು ರಾಮನಗರ ಜಿಲ್ಲಾಧಿಕಾರಿಗೆ ಅಧಿಕೃತ ಟಿಪ್ಪಣಿ ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ. ಇದೆಲ್ಲ ಆದ ನಂತರ ಮಾರ್ಚ್ 18ರಂದು ಟ್ರಸ್ಟ್ನಿಂದ ಔಪಚಾರಿಕವಾಗಿ ಮನವಿ ಪತ್ರ ಪಡೆದಿದ್ದಾರೆ. 2018ರ ಫೆಬ್ರವರಿ 26ರಂದು ಭೂಮಿ ಮಂಜೂರು ಮಾಡಲಾಗಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಯಾವುದೇ ಕ್ರೈಸ್ತ ಧರ್ಮೀಯರು ಜಾಗ ಮಂಜೂರಿಗಾಗಿ ಮನವಿ ಮಾಡಿಲ್ಲ. ಡಿಕೆ ಸಹೋದರರು ತಮ್ಮ ಸ್ವಹಿತಾಸಕ್ತಿ, ರಾಜಕೀಯ ಸ್ವಾರ್ಥಕ್ಕಾಗಿ ಜಮೀನು ಮಂಜೂರು ಮಾಡಿಸಿದ್ದಾರೆ. ಜಾತಿ, ಮತ ಮತ್ತು ಧರ್ಮದ ಆಧಾರದಲ್ಲಿ ಭೂಮಿ ಮಂಜೂರು ಮಾಡುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದಿರುವ ಅರ್ಜಿದಾರರು, ಭೂ ಮಂಜೂರಾತಿ ಮತ್ತು ಭೂಪರಿವರ್ತನೆಯ ಶುಲ್ಕ ಮನ್ನಾ ಮಾಡಿರುವುದನ್ನು ಸಹ ಪ್ರಶ್ನಿಸಿದ್ದಾರೆ. ಅರ್ಜಿಯನ್ನು ಪರಿಗಣಿಸಿದ ನ್ಯಾಯಪೀಠ, ನ್ಯಾಯಾಲಯದ ಅನುಮತಿ ಪಡೆಯದೆ ಯಾವುದೇ ನಿರ್ಮಾಣ ಕಾರ್ಯ ನಡೆಸದಂತೆ ಟ್ರಸ್ಟ್ಗೆ ಸೂಚನೆ ನೀಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಮನಗರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಕನಕಪುರದಲ್ಲಿ ಕೇವಲ ಕೆಲವೇ ಮಂದಿ ಕ್ರಿಶ್ಚಿಯನ್ನರಿದ್ದಾರೆ. ಕನಕಪುರದ ಹಾರೋಬೆಲೆಯಲ್ಲಿ 2000 ಮಂದಿಯಿದ್ದು ಸುಮಾರು 1500 ಕ್ರಿಶ್ಚಿಯನ್ನುರು ಹಾರೋಬೆಲೆ ಮತ್ತು ನಲ್ಲಹಳ್ಳಿ ಗ್ರಾಮಗಳಲ್ಲಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ,